ನವದೆಹಲಿ: ಎವಿನ್ ಲೆವಿಸ್, ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 7ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಪಡೆ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಗೆದ್ದ ಲಕ್ನೋ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಚೆನ್ನೈ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 210 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಗೆಲುವಿನ ಗುರಿ ಬೆನ್ನತ್ತಿದ ಲಕ್ನೋ ತಂಡ ಕೊನೆವರೆಗೂ ಹೋರಾಟ ನಡೆಸಿ ಗೆಲುವಿನ ನಗೆ ಬೀರಿತು.
ಬೃಹತ್ ಮೊತ್ತ ಪೇರಿಸಿದ ಚೆನ್ನೈ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೆ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 210 ರನ್ ಕಲೆಹಾಕಿತು. ಅಬ್ಬರದ ಬ್ಯಾಟಿಂಗ್ ನಡೆಸಿದ ರಾಬಿನ್ ಉತ್ತಪ್ಪ(50) ಕೇವಲ 27 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. ಶಿವಂ ದುಬೆ (49) ಕೇವಲ 1 ರನ್ ನಿಂದ ಅರ್ಧ ಶತಕದಿಂದ ವಂಚಿತರಾದರು. ಇನ್ನುಳಿದಂತೆ ಮಯಿಲ್ ಅಲಿ(35), ಅಂಬಾಟಿ ರಾಯುಡು(27), ರವೀಂದ್ರ ಜಡೇಜಾ(17) ಮತ್ತು ಎಂ.ಎಸ್.ಧೋನಿ ಔಟಾಗದೆ 16 ರನ್ ಗಳಿಸಿದರು. ಲಕ್ನೋ ಪರ ರವಿ ಬಿಷ್ಣೋಯಿ, ಆವೆಶ್ ಖಾನ್ ಮತ್ತು ಆಂಡ್ರ್ಯೂ ಟೈ ತಲಾ 2 ವಿಕೆಟ್ ಪಡೆದು ಮಿಂಚಿದರು.
ಬೃಹತ್ ಮೊತ್ತ ಚೇಸ್ ಮಾಡಿ ಗೆದ್ದ ಲಕ್ನೋ
ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ್ದ ಲಕ್ನೋ 19.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು. ಲಕ್ನೋ ಪರ ಕ್ವಿಂಟನ್ ಡಿ ಕಾಕ್ (61), ಎವಿನ್ ಲೆವಿಸ್ (ಅಜೇಯ 55) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅರ್ದಶತಕ ಬಾರಿಸಿದರು. ನಾಯಕ ಕೆ.ಎಲ್.ರಾಹುಲ್(40) ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದರು. ಇನ್ನುಳಿದಂತೆ ಆಯುಷ್ ಬದೋನಿ ಔಟಾಗದೆ 19 ಮತ್ತು ದೀಪಕ್ ಹೂಡಾ(13) ರನ್ ಗಳಿಸಿದರು. ಚೆನ್ನೈ ಪರ ಬೌಲಿಂಗ್ ನಲ್ಲಿ ಡ್ವೈನ್ ಪ್ರಿಟೋರಿಯಸ್ 2 ವಿಕೆಟ್ ಪಡೆದು ಮಿಂಚಿದರೆ, ತುಷಾರ್ ದೇಶಪಾಂಡೆ ಮತ್ತು ಡ್ವೇನ್ ಬ್ರಾವೊ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.