Stunning Catch: ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್‌ಗೆ ಪ್ರಧಾನಿ ಮೋದಿ ಸೇರಿ ದಿಗ್ಗಜರ ಮೆಚ್ಚುಗೆ

ಪ್ರಧಾನಿ ಮೋದಿ, ಸಚಿನ್ ತೆಂಡೂಲ್ಕರ್, ನಟ ಕಿಚ್ಚ ಸುದೀಪ್ ಸೇರಿ ಅನೇಕ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Jul 11, 2021, 11:04 AM IST
  • ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಅದ್ಭುತ ಕ್ಯಾಚ್ ಹಿಡಿದ ಹರ್ಲೀನ್ ಡಿಯೋಲ್
  • ‘ಅದ್ಭುತ ಕ್ಯಾಚ್, ಬೇಷ್’ ಎಂದು ಮೆಚ್ಚುಗೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
  • ಭಾರತ ಸೋತರೂ ಅದ್ಭುತ ಕ್ಯಾಚ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಕದ್ದ ಹರ್ಲೀನ್
Stunning Catch: ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್‌ಗೆ ಪ್ರಧಾನಿ ಮೋದಿ ಸೇರಿ ದಿಗ್ಗಜರ ಮೆಚ್ಚುಗೆ  title=

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ.20 ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್(Harleen Deol) ಹಿಡಿದ ಅದ್ಭುತ ಕ್ಯಾಚ್‌ಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ದಿಗ್ಗಜರು ಫಿದಾ ಆಗಿದ್ದಾರೆ. ಬೌಂಡರಿ ಲೈನ್ ಬಳಿ ಸಿಕ್ಸ್ ಹೋಗುತ್ತಿದ್ದ ಬಾಲ್ ತಡೆದು ಕ್ಯಾಚ್ ಹಿಡಿದಿರುವ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ(Narendra Modi), ಸಚಿನ್ ತೆಂಡೂಲ್ಕರ್, ನಟ ಕಿಚ್ಚ ಸುದೀಪ್ ಸೇರಿದಂತೆ ಅನೇಕ ದಿಗ್ಗಜರು ಹರ್ಲೀನ್ ಹಿಡಿದ ಅದ್ಭುತ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾರ್ಥಾಂಪ್ಟನ್ ನಲ್ಲಿ ಮೊದಲ ಟಿ.20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋತರೂ ಕೂಡ ಹರ್ಲೀನ್ ಹಿಡಿದ ಕ್ಯಾಚ್ ಎಲ್ಲರ ಗಮನ ಸೆಳೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 19ನೇ ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 166 ರನ್ ಗಳಿಸಿತ್ತು. ಈ ವೇಳೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಅಮಿ ಜೋನ್ಸ್ 26 ಎಸೆತಗಳಲ್ಲಿ 43 ರನ್ ಗಳಿಸಿ ಆಡುತ್ತಿದ್ದರು. ಶಿಖಾ ಪಾಂಡೆ ಎಸೆತವನ್ನು ಅಮಿ ಜೋನ್ಸ್(Amy Jones) ದೊಡ್ಡ ಹೊಡೆತದ ಮೂಲಕ ಸಿಕ್ಸರ್ ಭಾರಿಸಲು ಪ್ರಯತ್ನಿಸಿದ್ದರು. ಆದರೆ ಬೌಂಡರಿ ಲೈನ್ ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಹರ್ಲೀನ್ ಮೇಲಕ್ಕೆ ನೆಗೆಯುವ ಮೂಲಕ ಬಾಲ್ ಅನ್ನು ತಡೆದರಲ್ಲದೆ, ಒಳಗೆ ಎಸೆಯುವ ಮೂಲಕ ಕ್ಷಣಮಾತ್ರದಲ್ಲಿಯೇ ಕ್ಯಾಚ್ ಮಾಡಿದರು. ಈ ಕ್ಯಾಚ್ ಮಹಿಳಾ ಕ್ರಿಕೆಟ್ ನಲ್ಲಿಯೇ ತೆಗೆದುಕೊಂಡ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಹರ್ಭಜನ್ ಸಿಂಗ್, ಗೀತಾ ಬಸ್ರಾ ದಂಪತಿಗೆ ಗಂಡು ಮಗು

 ಅದ್ಭುತ ಕ್ಯಾಚ್ ಹಿಡಿದ ಬಳಿಕ 23 ವರ್ಷದ ಹರ್ಲೀನ್ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿಯವರಂತೂ ಹರ್ಲೀನ್ ಅವರ ಫ್ಯಾನ್ ಆಗಿದ್ದು, ತಮ್ಮ ಇನ್‌ಸ್ಟಾಗ್ರಾಮ್(Instagram) ಸ್ಟೋರಿಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಅದ್ಭುತ ಕ್ಯಾಚ್, ಭೇಷ್’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

Narendra Modi

‘ಗಾಡ್ ಆಫ್ ಕ್ರಿಕೆಟ್’ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಹರ್ಲೀನ್ ಕ್ಯಾಚ್‌ಗೆ ಮನಸೋತಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ಅದು ಅದ್ಭುತ ಕ್ಯಾಚ್ ಆಗಿತ್ತು ಹರ್ಲೀನ್ ಡಿಯೋಲ್, ಖಂಡಿತವಾಗಿಯೂ ಇದು ನನಗೆ ಈ ವರ್ಷದ ಅತ್ಯುನ್ನತ ಕ್ಯಾಚ್ ಆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಹರ್ಲೀನ್ ಕ್ಯಾಚ್‌ಗೆ ಫಿದಾ ಆಗಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ: IND Vs SL:ಭಾರತ-ಶ್ರೀಲಂಕಾ ODI ಸರಣಿಯಲ್ಲಿ ಮತ್ತೆ ಬದಲಾವಣೆ! ಜುಲೈ 18ಕ್ಕೆ ಮೊದಲ ಪಂದ್ಯ!

 ಹರ್ಲೀನ್ ಅವರ ಅದ್ಭುತ ಕ್ಯಾಚ್ ಹೊರತಾಗಿಯೂ ಈ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನಟ್ಟಿದ ಭಾರತ 8.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ಈ ವೇಳೆ ಆಟಕ್ಕೆ ಮಳೆರಾಯ ಅಡ್ಡಿ ಮಾಡಿದ್ದರಿಂದ, ಡಕ್ ವರ್ತ್ ಲೂಯಿಸ್ ನಿಯಮ ಪ್ರಕಾರ ಇಂಗ್ಲೆಂಡ್ ಗೆಲುವು ಸಾಧಿಸಿತು. ಟೀಂ ಇಂಡಿಯಾ(Team India) ಸೋಲು ಕಂಡರೂ ಹರ್ಲೀನ್ ಅವರ ಕ್ಯಾಚ್ ಕ್ರಿಕೆಟ್ ಅಭಿಮಾನಿಗಳಿಗೆ ಅದ್ಭುತ ನೆನಪಾಗಿ ಉಳಿದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

 

Trending News