ವಾಷಿಂಗ್ಟನ್: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪಾಕಿಸ್ತಾನ ನಿರ್ಧಾರವನ್ನು ಅಮೇರಿಕಾ ಸ್ವಾಗತಿಸಿದೆ.
ಎರಡೂ ರಾಷ್ಟ್ರಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ಭಾರತೀಯ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗುರುವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಘೋಷಿಸಿದರು.
ಸುದ್ದಿಸಂಸ್ಥೆ ಪಿಟಿಐ ಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಮೇರಿಕಾದ ವಿದೇಶ ಸಚಿವಾಲಯದ ವಕತಾರ ಖಾನ್, "ಶುಕ್ರವಾರ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯನ್ನು ಘೋಷಿಸಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ" ಎಂದಿದ್ದಾರೆ.
"ನೇರ ಮಾತುಕತೆ ಮತ್ತು ಇತರ ವಿಧಾನಗಳಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ಎರಡೂ ರಾಷ್ಟ್ರಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಯುನೈಟೆಡ್ ಸ್ಟೇಟ್ಸ್ ಕೋರುತ್ತದೆ. ಮಿಲಿಟರಿ ಚಟುವಟಿಕೆಯಿಂದ ವಿಷಯಗಳು ಇನ್ನಷ್ಟು ಗಂಭೀರವಾಗುತ್ತವೆ" ಎಂದು ಅವರು ಹೇಳಿದ್ದಾರೆ.
"ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುದಾಣವನ್ನು ನಾಶಗೊಳಿಸುವಂತೆ ಮತ್ತು ಯುಎನ್ ಭದ್ರತಾ ಮಂಡಳಿಗೆ ನಿಮ್ಮ ಬದ್ಧತೆಗಳನ್ನು ಪೂರೈಸಲು ನಾವು ಪಾಕಿಸ್ತಾನಕ್ಕೆ ಮನವಿ ಮಾಡಿದೆವು" ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತದ ವಾಯುಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ಮಿಗ್ 21 ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸಲಾಯಿತು. ಆಗ ಅಭಿನಂದನ್ ಪ್ಯಾರಾಚೂಟ್ ಮೂಲಕ ಹೊರ ಜಿಗಿದು ಪಿಓಕೆ ನೆಲದಲ್ಲಿ ಇಳಿದರು. ಅವರನ್ನು ಸ್ಥಳೀಯರು ಸುತ್ತುವರಿದು ಹಿಂಸಿಸಿ ಪಾಕ್ ಸೇನೆ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.
ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಹೇಳಿದ್ದ ಭಾರತಕ್ಕೆ, ಪಾಕ್ ಮಾತುಕತೆಗೆ ಆಹ್ವಾನಿಸಿತ್ತು. ಹಾಗೆಯೇ ಮಾತುಕತೆಗೆ ಒಪ್ಪಿದರೆ ಮಾತ್ರ ಅಭಿನಂದನ್ ರನ್ನು ಬಿಡುಗಡೆ ಮಾಡುವುದಾಗಿ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಸಚಿವಾಲಯ ಕೂಡಲೇ ಭಾರತೀಯ ಪೈಲಟ್ ರನ್ನು ವಾಪಸ್ ಕಳುಹಿಸಿಕೊಡಬೇಕು. ಪೈಲಟ್ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಷರತ್ತಿಗೂ ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ವಿಂಗ್ ಕಮಾಂಡರ್'ಗೆ ತೊಂದರೆ ಮಾಡಿದರೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.