Crude Oil : ರಷ್ಯಾದ ಕಚ್ಚಾತೈಲವನ್ನು ಪಾಶ್ಚಾತ್ಯ ರಾಷ್ಟ್ರಗಳ ಇಂಧನವಾಗಿಸುತ್ತಿದೆ ಭಾರತ!

ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ಸಂಸ್ಕರಿಸಿ, ಇಂಧನವನ್ನಾಗಿಸಿ, ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಇತ್ತೀಚಿನ ನೀತಿಯಂತೆ ಈ ಇಂಧನದ ಮೂಲ ರಾಷ್ಟ್ರವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಆಗುತ್ತಿದೆ.

Written by - Girish Linganna | Last Updated : Feb 8, 2023, 07:21 PM IST
  • ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ
  • ನವದೆಹಲಿ ಕೈಗೊಂಡಿರುವ ನೂತನ ಕ್ರಮಗಳು
  • ತೈಲ ವ್ಯವಹಾರಗಳಲ್ಲಿ ಭಾರತ ಅತ್ಯಂತ ಪ್ರಭಾವಶಾಲಿ ಪಾತ್ರ
Crude Oil : ರಷ್ಯಾದ ಕಚ್ಚಾತೈಲವನ್ನು ಪಾಶ್ಚಾತ್ಯ ರಾಷ್ಟ್ರಗಳ ಇಂಧನವಾಗಿಸುತ್ತಿದೆ ಭಾರತ! title=

Russian crude oil : ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ಸಂಸ್ಕರಿಸಿ, ಇಂಧನವನ್ನಾಗಿಸಿ, ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಇತ್ತೀಚಿನ ನೀತಿಯಂತೆ ಈ ಇಂಧನದ ಮೂಲ ರಾಷ್ಟ್ರವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಆಗುತ್ತಿದೆ.

ನವದೆಹಲಿ ಕೈಗೊಂಡಿರುವ ನೂತನ ಕ್ರಮಗಳು ಪಾಶ್ಚಾತ್ಯ ರಾಷ್ಟ್ರಗಳ ರೇಡಾರ್‌ಗೆ ಗುರಿಯಾಗಿಲ್ಲ. ಯಾಕೆಂದರೆ ಭಾರತ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಮಾಸ್ಕೋದ ತೈಲ ಆದಾಯವೂ ಕಡಿಮೆಯಾಗಿದ್ದು, ಪಾಶ್ಚಾತ್ಯ ಜಗತ್ತಿಗೆ ತೈಲ ಪೂರೈಕೆಯ ಕೊರತೆಯೂ ಉಂಟಾಗದಂತೆ ತಡೆದಿದೆ.

ಇಂದು ಜಾಗತಿಕ ತೈಲ ವ್ಯವಹಾರಗಳಲ್ಲಿ ಭಾರತ ಅತ್ಯಂತ ಪ್ರಭಾವಶಾಲಿ ಪಾತ್ರವನ್ನು ನಿರ್ವಹಿಸುತ್ತಿದೆ. ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಭಾರತದಲ್ಲಿ ಸಂಸ್ಕರಿಸಿ, ಬಳಿಕ ಇಂಧನವನ್ನು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕಾಗೆ ಪೂರೈಸುತ್ತಿದೆ.

ಇದನ್ನೂ ಓದಿ : Today Gold Price : ಆಭರಣ ಪ್ರಿಯರಿಗೆ ಬಿಗ್ ಶಾಕ್! ಇಂದು ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆ!

ಇಂತಹ ಕ್ರಮಗಳ ಹೊರತಾಗಿಯೂ, ಭಾರತದ ವಿರುದ್ಧ ಇಂದಿಗೂ ಯಾವುದೇ ಋಣಾತ್ಮಕ ಮಾತುಗಳು ಕೇಳಿ ಬಂದಿಲ್ಲ. ಯಾಕೆಂದರೆ ಭಾರತದ ಕ್ರಮಗಳು ಪಾಶ್ಚಾತ್ಯ ರಾಷ್ಟ್ರಗಳ ಗುರಿಯಾದ ರಷ್ಯಾದ ತೈಲ ಆದಾಯ ಕಡಿಮೆಯಾಗಿಸುವುದು ಮತ್ತು ಪಾಶ್ಚಾತ್ಯ ಜಗತ್ತಿಗೆ ತಡೆ ರಹಿತ ಇಂಧನ ಪೂರೈಸುವುದನ್ನು ಯಶಸ್ವಿಯಾಗಿಸಿವೆ. ಭಾರತ ಕಡಿಮೆ ಬೆಲೆಗೆ ರಷ್ಯಾದಿಂದ ಖರೀದಿಸುವ ಕಚ್ಚಾ ತೈಲ ರಷ್ಯಾಗೆ ಮೊದಲಿನಂತೆ ಹೆಚ್ಚಿನ ಆದಾಯ ಒದಗಿಸುತ್ತಿಲ್ಲ. ಭಾರತದಲ್ಲಿ ಸಂಸ್ಕರಿಸಿದ ಇಂಧನಗಳು ಪಾಶ್ಚಾತ್ಯ ರಾಷ್ಟ್ರಗಳಿಗೆ ಪೂರೈಕೆಯಾಗುತ್ತಿದೆ. ಎಲ್ಲಕ್ಕೂ ಹೆಚ್ಚಾಗಿ, ಐರೋಪ್ಯ ಒಕ್ಕೂಟ ರಷ್ಯಾದ ಮೇಲೆ ಹೆಚ್ಚು ಹೆಚ್ಚು ನಿರ್ಬಂಧಗಳನ್ನು ಹೇರುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರಧಾ‌ನ ಪಾತ್ರ ನಿರ್ವಹಿಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್ ನೇತೃತ್ವದಲ್ಲಿ ಉಕ್ರೇನ್ ಮೇಲೆ ಕಳೆದ ವರ್ಷ ಆರಂಭವಾದ ಯುದ್ಧದ ಪರಿಣಾಮವಾಗಿ ಭಾರತ ಇಂದು ತೈಲ ಮಾರುಕಟ್ಟೆಯಲ್ಲಿ ಕೇಂದ್ರಬಿಂದುವಾಗಿದೆ.

ಅಮೆರಿಕಾದ ಖಜಾನೆ ಇಲಾಖೆ ಎರಡು ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಅವೆಂದರೆ, ತೈಲ ಮಾರುಕಟ್ಟೆಯಲ್ಲಿ ಅಗತ್ಯವಿದ್ದಷ್ಟು ಇಂಧನ ಪೂರೈಕೆ ನಡೆಯುವುದು ಮತ್ತು ರಷ್ಯಾ ತನ್ನ ತೈಲದಿಂದ ನಿರೀಕ್ಷಿತ ಲಾಭ ಪಡೆಯದಂತೆ ತಡೆಯುವುದು. ವಾಷಿಂಗ್ಟನ್ ಡಿಸಿಯ ಸೆಂಟರ್ ಫಾರ್ ಸ್ಟ್ರಾಟಿಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಬೆನ್ ಕಾಹಿಲ್ ಅವರು ಅಮೆರಿಕಾದ ಹಣಕಾಸು ಇಲಾಖೆ ಭಾರತ ಮತ್ತು ಚೀನಾಗಳು ಕಡಿಮೆ ಬೆಲೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಇಂಧನ ತಯಾರಿಸಿ, ಆ ಇಂಧನವನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತವೆ ಎನ್ನುವುದನ್ನು ಅರಿತಿದೆ. ಆದರೂ ಈ ಪರಿಸ್ಥಿತಿಯನ್ನು ಅಮೆರಿಕಾ ಪ್ರಶ್ನಿಸುತ್ತಿಲ್ಲ ಎಂದಿದ್ದಾರೆ.

ಕಳೆದ ತಿಂಗಳು ಭಾರತ ಪ್ರತಿದಿನವೂ ಸರಾಸರಿ 89,000 ಬ್ಯಾರೆಲ್‌ಗಳಷ್ಟು ಗ್ಯಾಸೋಲಿನ್ ಹಾಗೂ ಡೀಸೆಲ್‌ಗಳನ್ನು ಅಮೆರಿಕಾಗೆ ರಫ್ತು ಮಾಡಿತ್ತು. 2017ರ ಬಳಿಕ ಇದು ಅತಿಹೆಚ್ಚು ಪ್ರಮಾಣದ ಇಂಧನ ರಫ್ತಾಗಿದೆ. ಅದರೊಡನೆ, ಭಾರತ ಯುರೋಪಿಗೆ ಪ್ರತಿದಿನವೂ 1,72,000 ಬ್ಯಾರೆಲ್‌ಗಳಷ್ಟು ಲೋ ಸಲ್ಫರ್ ಡೀಸೆಲ್ ರಫ್ತು ಮಾಡಿದ್ದು, ಇದು ಅಕ್ಟೋಬರ್ 2021ರ ಬಳಿಕ ಅತ್ಯಧಿಕ ಪ್ರಮಾಣವಾಗಿದೆ.

ರಷ್ಯಾದ ತೈಲ ರಫ್ತಿನ ಮೇಲೆ ಐರೋಪ್ಯ ಒಕ್ಕೂಟದ ನೂತನ ನಿರ್ಬಂಧಗಳು ಭಾನುವಾರದಿಂದ ಜಾರಿಗೆ ಬರಲಿದ್ದು, ಆ ಬಳಿಕ ತೈಲ ಮಾರುಕಟ್ಟೆಯಲ್ಲಿ ಭಾರತದ ಪಾತ್ರ ಇನ್ನಷ್ಟು ಹೆಚ್ಚಲಿದೆ. ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಅಪಾರ ಪ್ರಮಾಣದ ರಷ್ಯನ್ ಡೀಸೆಲ್ ಅನ್ನು ಹೊರಹಾಕಲಿದ್ದು, ಯುರೋಪಿನ ರಾಷ್ಟ್ರಗಳು ಇಂಧನಕ್ಕಾಗಿ ಏಷ್ಯಾದ ರಾಷ್ಟ್ರಗಳೆಡೆ ಮುಖ ಮಾಡಲಿವೆ.

ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಖರೀದಿ ಭಾರತಕ್ಕೆ ಇನ್ನಷ್ಟು ಲಾಭದಾಯಕವಾಗಲಿದೆ. ರಷ್ಯಾದಿಂದ ನಡೆಸುವ ಆಮದು ಭಾರತದ 85% ಕಚ್ಚಾ ತೈಲ ಬೇಡಿಕೆಯನ್ನು ಪೂರೈಸುತ್ತಿದೆ. ದೇಶಕ್ಕೆ ಅಗತ್ಯ ಇಂಧನ ಪೂರೈಸುವ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೂ ಸೇರಿದಂತೆ, ಭಾರತದ ತೈಲ ಸಂಸ್ಕರಣಾಗಾರಗಳು 2020ರಲ್ಲಿ ತಮ್ಮ ಇಂಧನ ರಫ್ತು ಹೆಚ್ಚಿಸಿ, ಅಂತಾರಾಷ್ಟ್ರೀಯ ಬೆಲೆಗೆ ಮಾರಾಟ ಮಾಡುತ್ತಿವೆ.

ಐಎನ್‌ಜಿ ಗ್ರೂಪ್ ಎನ್‌ವಿ ಸಂಸ್ಥೆಯ ಸಿಂಗಾಪುರ ಮೂಲದ ಹೆಡ್ ಆಫ್ ಕಮಾಡಿಟೀಸ್ ಸ್ಟ್ರಾಟೆಜಿ ವಿಭಾಗ ಮುಖ್ಯಸ್ಥರಾಗಿರುವ ವಾರನ್ ಪ್ಯಾಟರ್ಸನ್ ಅವರು ಭಾರತ ಪ್ರಸ್ತುತ ಇರುವ ತೈಲದ ಕೊರತೆಯನ್ನು ನೀಗಿಸುವ ರೀತಿಯಲ್ಲಿ ಪಾಶ್ಚಾತ್ಯ ಜಗತ್ತಿಗೆ ಸಂಸ್ಕರಿಸಿದ ಇಂಧನವನ್ನು ಪೂರೈಸುತ್ತಿದೆ ಎಂದಿದ್ದಾರೆ. ಈ ಇಂಧನಗಳ ಪೂರೈಕೆಗೆ ಬಹುಪಾಲು ಕಚ್ಚಾ ತೈಲ ರಷ್ಯಾ ಮೂಲದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಐರೋಪ್ಯ ಒಕ್ಕೂಟದ ನಿಯಮಗಳ ಪ್ರಕಾರ, ಭಾರತ ಅದು ವಿಧಿಸಿದ ಶಾಸನಗಳನ್ನು ಅನುಸರಿಸುತ್ತಿದೆ. ಒಂದು ಬಾರಿ ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲ ಯುರೋಪಿಯನ್ ಒಕ್ಕೂಟದ ಭಾಗವಲ್ಲದ, ಭಾರತದಂತಹ ರಾಷ್ಟ್ರಗಳಲ್ಲಿ ಸಿದ್ಧ ವಸ್ತುವಾಗಿ ಮಾರ್ಪಾಡಾದ ಬಳಿಕ ಅದನ್ನು ಯುರೋಪಿಯನ್ ಒಕ್ಕೂಟಕ್ಕೆ ಮಾರಾಟ ಮಾಡಬಹುದು. ಆ ಉತ್ಪನ್ನವನ್ನು ಐರೋಪ್ಯ ಒಕ್ಕೂಟ ರಷ್ಯಾದ ಉತ್ಪನ್ನ ಎಂದು ಪರಿಗಣಿಸುವುದಿಲ್ಲ.

ಏಳು ರಾಷ್ಟ್ರಗಳ ಒಕ್ಕೂಟ ರಷ್ಯಾದ ಒಟ್ಟಾರೆ ಆದಾಯವನ್ನು ಸಾಧ್ಯವಾದಷ್ಟೂ ಕಡಿತಗೊಳಿಸಬೇಕೆಂದು ಪ್ರಯತ್ನಿಸುತ್ತಿದೆ. ಆದರೂ, ಅದು ರಷ್ಯಾದ ಕಚ್ಚಾ ತೈಲ ಹಾಗೂ ಸಿದ್ಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆ ಮೂಲಕ ಜಾಗತಿಕವಾಗಿ ಕೊರತೆ ಎದುರಾಗದಂತೆ ತಡೆಯಬೇಕೆಂದು ಉದ್ದೇಶಿಸುತ್ತದೆ ಎಂದು ವೊರ್ಟೆಕ್ಸಾ ಲಿಮಿಟೆಡ್‌ನ ಏಷ್ಯಾ ತಜ್ಞರಾದ ಸೆರೆನಾ ಹುವಾಂಗ್ ಅಭಿಪ್ರಾಯ ಪಡುತ್ತಾರೆ.

ರಷ್ಯಾ ಸರ್ಕಾರಕ್ಕೆ ತೈಲದಿಂದ ಬರುವ ಆದಾಯವನ್ನು ಕಡಿಮೆಗೊಳಿಸಿ, ಆದರೂ ಒಂದಷ್ಟು ಪ್ರಮಾಣದ ತೈಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರಬೇಕು ಎಂಬ ಉದ್ದೇಶದಿಂದ ಅಮೆರಿಕಾ ನೇತೃತ್ವದಲ್ಲಿ ರಷ್ಯಾದ ತೈಲದ ಮೇಲೆ ಬೆಲೆ ನಿಗದಿಪಡಿಸಲಾಗಿದೆ. ಭಾರತ ಇನ್ನೂ ತಾನು ಈ ನಿರ್ಬಂಧಗಳನ್ನು ಅನುಸರಿಸುತ್ತೇನೋ ಇಲ್ಲವೋ ಎಂದು ಸ್ಪಷ್ಟವಾಗಿ ಹೇಳಿಲ್ಲ. ಆದರೆ ಈ ನಿರ್ಬಂಧಗಳು ಒಪೆಕ್+ ತೈಲ ಉತ್ಪಾದಕರ ತೈಲಗಳಿಗೆ 60 ಡಾಲರ್‌ಗಿಂತ ಕಡಿಮೆ ಬೆಲೆ ನಿಗದಿಪಡಿಸುವಂತೆ ಮಾಡಿವೆ.

ಇದನ್ನೂ ಓದಿ : Ration Card : ನಿಮ್ಮ ವಿತರಕರು ಕಡಿಮೆ ಪಡಿತರ ನೀಡುತ್ತಿದ್ದಾರೆಯೇ? ಇಲ್ಲಿ ದೂರು ನೀಡಿ

ಅಮೆರಿಕಾದ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ವಕ್ತಾರರೊಬ್ಬರು ಗರಿಷ್ಠ ಬೆಲೆ ನಿಗದಿಪಡಿಸಿರುವ ಕಾರಣದಿಂದ ಭಾರತದಂತಹ ರಾಷ್ಟ್ರಗಳು ಇಂಧನ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಮತ್ತು ಇದೇ ಸಂದರ್ಭದಲ್ಲಿ ರಷ್ಯಾದ ಇಂಧನ ಆದಾಯ ಕಡಿಮೆಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಸೆಂಟರ್ ಆನ್ ಗ್ಲೋಬಲ್ ಎನರ್ಜಿ ಪಾಲಿಸಿ ಸ್ಥಾಪಕರು ಮತ್ತು ಒಬಾಮಾ ಸರ್ಕಾರದ ಸಲಹೆಗಾರರಾಗಿದ್ದ ಜೇಸನ್ ಬಾರ್ಡೋಫ್ ಅವರ ಪ್ರಕಾರ, ರಷ್ಯಾದಿಂದ ಕಡಿಮೆ ಬೆಲೆಗೆ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಖರೀದಿಸುವ ಭಾರತದ ಪ್ರಯತ್ನಗಳು ಲಾಭದಾಯಕವಾಗಿದ್ದು, ತೊಂದರೆ ನೀಡುವ ಕ್ರಮಗಳಾಗಿಲ್ಲ. ಈ ಕ್ರಮಗಳು ತಮಗೆ ಇಂಧನದ ಕೊರತೆಯಾಗದಂತೆ, ರಷ್ಯಾದ ಆದಾಯ ತಗ್ಗಿಸಬೇಕೆನ್ನುವ ಐರೋಪ್ಯ ರಾಷ್ಟ್ರಗಳ ಯೋಜನೆಗೆ ತಕ್ಕಂತೆಯೇ ಇವೆ.

ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಇಂಧನ ಸಮಾವೇಶದಲ್ಲಿ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕಾ, ಅಬು ಧಾಬಿ ನ್ಯಾಷನಲ್ ಆಯಿಲ್ ಕೋ ಗಳ ಸಿಇಓಗಳು ಹಾಗೂ ಪ್ರತಿನಿಧಿಗಳೂ ಭಾಗವಹಿಸಿ, ಇಂಧನ ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News