ನವದೆಹಲಿ:ಪ್ಯಾನ್-ಆಧಾರ್ ಲಿಂಕ್ ಮಾಡಲು ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ನೆಮ್ಮದಿಯ ಸುದ್ದಿಯನ್ನು ಪ್ರಕಟಿಸಿದೆ. ಆದರೆ, ಈ ನೆಮ್ಮದಿ ಷರತ್ತುಗಳನ್ನು ವಿಧಿಸಿ ನೀಡಲಾಗಿದೆ. ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31, 2020 ಅಂತಿಮ ಗಡುವಾಗಿದೆ. ಈ ದಿನಾಂಕದ ಬಳಿಕ ಆಧಾರ್ ಕಾರ್ಡ್ ಗೆ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳು ರದ್ದಾಗಲಿವೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೆಸ್ (CBDT) ಇದಕ್ಕೂ ಮುನ್ನ ನಾಲ್ಕು ಬಾರಿಗೆ ಪ್ಯಾನ್-ಆಧಾರ್ ಜೋಡಿಸಲು ತಾನು ನೀಡಿದ್ದ ಅಂತಿಮ ಗಡುವನ್ನು ವಿಸ್ತರಿಸಿತ್ತು. ಆದರೆ, ಈ ಕುರಿತು ಇದೀಗ CBDT ನೂತನ ಷರತ್ತುಗಳನ್ನು ಒಳಗೊಂಡ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಫಿಕೇಶನ್ ಜಾರಿಯಾಗುತ್ತಲೇ ಇನ್ಮುಂದೆ ಈ ಗಡವು ವಿಸ್ತರಣೆಯಾಗದು ಎಂಬುದು ಸಾಬೀತಾಗಿದೆ.
ರದ್ದಾಗಲಿದೆ ಪ್ಯಾನ್ ಕಾರ್ಡ್
ಪ್ಯಾನ್-ಆಧಾರ್ ಲಿಂಕಿಂಗ್ ಗೆ ಮಾರ್ಚ್ 31, 2020 ಅಂತಿಮ ತಿಥಿಯಾಗಿದೆ. ಈ ತಾರೀಖಿಗೆ ಮೊದಲು ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿರದೆ ಹೋದ ಸಂದರ್ಭದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಆದಾಯ ತೆರಿಗೆ ಪಾವತಿಯಲ್ಲಿ ಲಾಭ ಪಡೆಯಲು ಈ ಜೋಡಣೆ ಅತ್ಯಾವಶ್ಯಕವಾಗಿದೆ. ಆದರೆ ಯಾವುದೇ ತೆರಿಗೆ ಪಾವತಿದಾರರು ಈ ನಿರ್ಧಾರಿತ ಅವಧಿಯಲ್ಲಿ ಪ್ಯಾನ್-ಆಧಾರ್ ಜೋಡಣೆ ಮಾಡದೆ ಹೋದಲ್ಲಿ ಅವರಿಗೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಮಾರ್ಚ್ 31ರ ಬಳಿಕವೂ ಕೂಡ ಅವರು ಈ ಕೆಲಸ ಮಾಡಬಹುದು. ಆದರೆ, ಆದಾಯ ತೆರಿಗೆ ಇಲಾಖೆ ಇದಕ್ಕಾಗಿ ಒಂದು ಷರತ್ತು ವಿಧಿಸಿದೆ.
ಏನಿದೆ ಷರತ್ತು?
ಮಾರ್ಚ್ 31ರ ಬಳಿಕ ಎಲ್ಲಿಯವರೆಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ನೋಟಿಸ್ ನಲ್ಲಿ ಹೇಳಿದೆ. ಅಂದರೆ, ಅಲ್ಲಿಯವರೆಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರೀಯ ಕೆಟಗರಿಗೆ ಸೇರಿಸಲಾಗುವುದು. ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಆದ ಬಳಿಕ ಮಾತ್ರ ಅದನ್ನು ಪುನಃ ಸಕ್ರೀಯಗೊಳಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರಕ್ಕೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ನಿಯಮದಲ್ಲಿ ಬದಲಾವಣೆ ತಂದಿದೆ CBDT
CBDT ಇತ್ತೀಚೆಗಷ್ಟೇ ನೂತನ ಅಧಿಸೂಚನೆ ಜಾರಿಗೊಳಿಸಿದ್ದು, ಇದರಲ್ಲಿ ಆದಾಯ ತೆರಿಗೆ ಕಾಯ್ದೆ 1962ರಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಹೌದು, ಆದಾಯ ತೆರಿಗೆ ಕಾಯ್ದೆ 1962ರ ನಿಯಮ 114AA ಗೆ ಇದೀಗ ಸಬ್ ಸೆಕ್ಷನ್ 114AAA ಅನ್ನು ಸೇರಿಸಲಾಗಿದೆ. ಹೊಸ ನಿಯಮದಲ್ಲಿ ಒಂದು ವೇಳೆ ಯಾವುದೇ ತೆರಿಗೆ ಪಾವತಿದಾರರು ಮಾರ್ಚ್ 31, 2020ರವರೆಗೆ ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡದೆ ಇದ್ದ ಸಂದರ್ಭದಲ್ಲಿ ಅವರಿಗೆ ಈ ನಿಯಮ ಅನ್ವಯಿಸಲಿದೆ ಎನ್ನಲಾಗಿದೆ. CBDT ನೂತನ ನೋಟಿಸ್ ಪ್ರಕಾರ ಜೂನ್ 1, 1917ರವರೆಗೆ ಯಾರಿಗೆ ಪ್ಯಾನ್ ಕಾರ್ಡ್ ವಿತರಿಸಲಾಗಿದೆಯೋ ಅವರಿಗೆ ಪ್ಯಾನ್-ಆಧಾರ್ ಜೋಡಣೆ ಮಾಡಲು ಮಾರ್ಚ್ 31, 2020 ಅಂತಿಮ ತಿಥಿ ಇರಲಿದೆ. ಈ ಲಿಂಕ್ ಮಾಡಿಸದೆ ಇರುವವರ ಪ್ಯಾನ್ ಕಾರ್ಡ್ ಅನ್ನು ಮಾರ್ಚ್ 31ರ ಬಳಿಕ ನಿಷ್ಕ್ರೀಯ ಎಂದು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.