ನವದೆಹಲಿ: ದೇಶದಲ್ಲಿ ಮಾರಣಾಂತಿಕ ಕರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪಿಎಂ ಮೋದಿಯವರ ಘೋಷಣೆಯ ನಂತರ, ರೈಲ್ವೆ ಸಚಿವಾಲಯವು ಮೇ 3 ರವರೆಗೆ ಪ್ರಯಾಣಿಕರ ರೈಲುಗಳ ಸೇವೆಯನ್ನೂ ಸಹ ಮೇ 3 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಅತ್ಯಾವಶ್ಯಕ ವಸ್ತುಗಳ ಪೂರೈಕೆಗೆ ಸರಕು ರೈಲುಗಳ ಸೇವೆ ಮುಂದುವರೆಯಲಿದೆ
ಈ ಕುರಿತು ಹೇಳಿಕೆ ನೀಡಿರುವ ರೇಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಪ್ಯಾಸಿಂಜರ್ ರೈಲು ಸೇವೆಯನ್ನು ಮೇ 3ರವರೆಗೆ ಸ್ಥಗಿತಗೊಳಿಸಲು ನಿಧರಿಸಲಾಗಿದ್ದು, ಈ ನಿರ್ಧಾರ ಸರಕು ರೈಲು ಸೇವೆಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಅಗತ್ಯ ವಸ್ತುಗಳನ್ನು ತುಪಿಸುವ ಉದ್ದೇಶದಿಂದ ಈ ಸೇವೆಯನ್ನು ಎಂದಿನಂತೆ ಮುಂದುವರೆಸಲಾಗುವುದು ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, "ಪ್ರಿಮಿಯಂ ರೈಲುಗಳು, ಮೇಲ್, ಎಕ್ಸ್ಪ್ರೆಸ್ ರೈಲುಗಳು, ಪ್ರಯಾಣಿಕರ ರೈಲುಗಳು, ಉಪನಗರ ರೈಲುಗಳು, ಕೋಲ್ಕತಾ ಮೆಟ್ರೋ ರೈಲು, ಕೊಂಕಣ ರೈಲ್ವೆ ಸೇರಿದಂತೆ ಭಾರತೀಯ ರೈಲ್ವೆಯ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು 2020ರ ಮೇ 3 ರವರೆಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೊಂಕಿನ ಪ್ರಕೋಪದ ಹಿನ್ನೆಲೆ ಎಲ್ಲಾ ರೀತಿಯ ರೈಲು ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದ್ದರೂ ಕೂಡ ದೇಶದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಖಚಿತಪದಿಸಲಾಗುವುದು ಎಂದು ಭಾರತೀಯ ರೇಲ್ವೆ ಹೇಳಿದೆ.
ಇದಕ್ಕೂ ಮೊದಲು ಘೋಷಿಸಲಾಗಿದ್ದ 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಇರುವ ನಾಗರಿಕರ ಮನೆಬಾಗಿಲಿಗೆ ಅಗತ್ಯವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಂತರ ಯಾವುದೇ ರೀತಿಯ ಅಡೆತಡೆ ಉಂಟಾಗದೇ ಇರಲಿ ಎಂಬುದಕ್ಕೆ ರೇಲ್ವೆ ಇಲಾಖೆ ಬದ್ಧವಾಗಿದೆ. ಇದಕ್ಕಾಗಿ ಪ್ರಯಾಣಿಕರ ರೈಲುಗಳು ಹಳಿಗಳಿಂದ ಕೆಳಗಿಳಿದ ಬಳಿಕ ಸರಕು ರೈಲುಗಳ ವೇಗದಲ್ಲಿ 4 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಈಗಾಗಲೇ ಇಲಾಖೆ ಹೇಳಿಕೊಂಡಿದೆ. ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಸಕ್ಕರೆ, ಉಪ್ಪು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ನಿಮ್ಮ ನಗರಕ್ಕೆ ತಲುಪಿಸುವ ಜವಾಬ್ದಾರಿ ರೇಲ್ವೆ ಇಲಾಖೆ ಹೊತ್ತುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ.