ನವದೆಹಲಿ: ಮಂತ್ರಕ್ಕೆ ತಿರುಮಂತ್ರ ಎನ್ನುವ ಮಾತು ರಾಜಕೀಯದಲ್ಲಿ ಆಗಾಗ ಚಾಲ್ತಿಯಲ್ಲಿದೆ.ಈಗ ಇದೆ ಮಾತಿಗನುಗುಣವಾಗಿ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿಗೆ ಅದರದೇ ತಂತ್ರದ ಮೂಲಕ ತಿರುಗೇಟು ನೀಡಿದ್ದಾರೆ.
ಬಿಹಾರದಲ್ಲಿ ಬಹುನಿರೀಕ್ಷಿತ ಕ್ಯಾಬಿನೆಟ್ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗ ತಮ್ಮ ಪಕ್ಷದ 8 ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಕೇವಲ ಒಂದು ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವ ಮೂಲಕ ತಮ್ಮದೆ ಸ್ಟೈಲ್ ನಲ್ಲಿ ಬಿಜೆಪಿಗೆ ಉತ್ತರ ನೀಡಿದ್ದಾರೆ.
Nitish Kumar has offered Bjp to fill the vacant ministerial seat.Bjp decided to fill it in future .
— Sushil Kumar Modi (@SushilModi) June 2, 2019
ಪ್ರಧಾನಿ ಮೋದಿಯ ನೂತನ ಸಚಿವ ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದೇ ಒಂದು ಸ್ಥಾನವನ್ನು ನೀಡಲಾಗಿತ್ತು. ಇದಕ್ಕೆ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಯಾವ ಸದಸ್ಯರು ಕೂಡ ಸಚಿವ ಸಂಪುಟದ ಭಾಗವಾಗಿರುವುದಿಲ್ಲ ಎಂದು ಹೇಳಿದ್ದರು.ಕೇವಲ ಪ್ರಾತಿನಿಧಿಕವಾಗಿ ಸ್ಥಾನ ತಮಗೆ ಬೇಕಾಗಿಲ್ಲ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದರು.ಆದರೆ ಎನ್ಡಿಎ ಒಕ್ಕೂಟಕ್ಕೆ ನೀಡಿರುವ ಬೆಂಬಲ ಮುಂದುವರೆಯಲಿದೆ ಎಂದು ಹೇಳಿದ್ದರು.
ಈಗ ಕೇಂದ್ರ ಸರ್ಕಾರದ ತಂತ್ರವನ್ನೇ ಅನುಸರಿಸಿ ರಾಜ್ಯ ಸಚಿವ ಸಂಪುಟದಲ್ಲಿ ಕೇವಲ ಒಂದೇ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ " ನಿತೀಶ್ ಕುಮಾರ್ ಅವರು ಖಾಲಿ ಉಳಿದಿರುವ ಸ್ಥಾನವನ್ನು ತುಂಬಲು ಬಿಜೆಪಿಗೆ ಕೇಳಿಕೊಂಡಿದ್ದರು. ಆದರೆ ಬಿಜೆಪಿ ಅದನ್ನು ಭವಿಷ್ಯದಲ್ಲಿ ತುಂಬಲು ನಿರ್ಧರಿಸಿದೆ' ಎಂದು ಟ್ವೀಟ್ ಮಾಡಿದ್ದಾರೆ.