ನವದೆಹಲಿ:ಡಿಜಿಟಲ್ ಹಣ ಪಾವತಿಯ ಮುಂಚೂಣಿಯ ಕಂಪನಿ ಫೋನ್‌ಪೇ ತನ್ನ ಬಳಕೆದಾರರಿಗೆ ದೊಡ್ಡ ಉಡುಗೊರೆಯೊಂದನ್ನುನೀಡಿದೆ. ಹೌದು, ಫೋನ್‌ಪೇ ಇದೀಗ ತನ್ನ ಗ್ರಾಹಕರಿಗೆ ಎಟಿಎಂ ಸೌಲಭ್ಯವನ್ನು ಪರಿಚಯಿಸಿದೆ. ತನ್ನ ಉಪಕ್ರಮವು ಸಣ್ಣ ನಗರಗಳಲ್ಲಿನ ಜನರ ನಗದು ಸಮಸ್ಯೆಗೆ ಅಂತ್ಯಹಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಸದ್ಯ ಫೋನ್‌ಪೇ ಈ ಸೌಲಭ್ಯವನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದೆ. ವಾಲ್‌ಮಾರ್ಟ್ ಮಾಲಿಕತ್ವದ ಫೋನ್‌ಪೇನ ಈ ಸೇವೆಯನ್ನು ಬಳಸಿ ಬಳಕೆದಾರರು ಫೋನ್‌ಪೇ ಮರ್ಚಂಟ್ ನಿಂದ ಹಣವನ್ನು ಪಡೆಯಬಹುದಾಗಿದೆ. ಈ ಸೇವೆಯನ್ನು ಬಳಸಿ ಫೋನ್‌ಪೇ ಬಳಕೆದಾರರು ತಮ್ಮ ನೆರೆಹೊರೆಯ ಅಂಗಡಿಯಿಂದ ಕೂಡ ಎಟಿಎಂ ಸೌಲಭ್ಯವನ್ನು ಪಡೆಯಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಇದರಿಂದ ಫೋನ್‌ಪೇ ಗ್ರಾಹಕರು ಹಣವನ್ನು ವಿಥ್ ಡ್ರಾ ಮಾಡಲು ಯಾವುದೇ ಎಟಿಎಂಗೆ ಹೋಗುವ ಅಗತ್ಯವಿಲ್ಲ. ಬದಲಾಗಿ, ನಿಮ್ಮ ಹತ್ತಿರದ ಯಾವುದೇ ಅಂಗಡಿಯವರಿಂದ ಹಣವನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಪ್ರಾಯೋಗಿಕ ಹಂತವಾಗಿ ಸಂಸ್ಥೆ ಈ ಸೇವೆಯನ್ನು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರ ನಗರಗಳಿಗೂ ಸಹ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ವ್ಯಾಪಾರಿಗಳಿಂದ ಹಣ ಪಡೆದ ಜನರು ಎಂದಿಗೂ ನಗದುರಹಿತರಾಗುವುದಿಲ್ಲ. ಅಲ್ಲದೆ, ಅಗತ್ಯವಿದ್ದಾಗ ಅವರು ಅದನ್ನು ಖರ್ಚು ಸಹ ಮಾಡಬಹುದು.
ಈ ಕುರಿತು ಮಾಹಿತಿ ನೀಡಿರುವ ಫೋನ್‌ಪೇನ ಆಫ್‌ಲೈನ್ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ವಿವೇಕ್ ಲೋಹ್ಚೆಬ್, ಫೋನ್‌ಪೇ ಎಟಿಎಂ ಸೇವೆಯಿಂದ, ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದು ಅಂಗಡಿಯವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದರಿಂದ ಯಾವುದೇ ಬ್ಯಾಂಕ್ ಗೆ ಹೋಗದೆ ಗ್ರಾಹಕರು ತಮ್ಮ ಖಾತೆಗೆ ಹಣವನ್ನು ವರ್ಗಾಗಿಸಬಹುದು. ಫೋನ್‌ಪೇ ಆರಂಭಿಸಿರುವ ಈ ಸೇವೆ ಮಾರುಕಟ್ಟೆಯಲ್ಲಿರುವ ಇತರೆ ಡಿಜಿಟಲ್ ಪೇಮೆಂಟ್ ಸೇವೆ ಒದಗಿಸುವ ಆಪ್ ಗಳಾಗಿರುವ Paytm, Amazon-Pay ಮತ್ತು Google Pay ಗಳಿಗೆ ಭಾರಿ ಪೈಪೋಟಿ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಫೋನ್‌ಪೇ ATM ಹೇಗೆ ಕಾರ್ಯನಿರ್ವಹಿಸಲಿದೆ
ನಗದು ಅಗತ್ಯವಿದ್ದಲ್ಲಿ, ಗ್ರಾಹಕರು ತಮ್ಮ ಫೋನ್‌ಪೇ ಅಪ್ಲಿಕೇಶನ್‌ನ ಸ್ಟೋರ್ ಟ್ಯಾಬ್‌ನಲ್ಲಿ ಹತ್ತಿರದಲ್ಲಿ ಫೋನ್‌ಪೇ ಎಟಿಎಂ ಸೇವೆ ಒದಗಿಸುವ ಅಂಗಡಿಗಳನ್ನು ಕಾಣಬಹುದು. ಬಳಿಕ ಫೋನ್‌ಪೇ ಅಪ್ಲಿಕೇಶನ್‌ನ 'ಕ್ಲಿಯರನ್ಸ್' ಗುಂಡಿ ಕ್ಲಿಕ್ಕಿಸಿ, ಹತ್ತಿರದ ಅಂಗಡಿಯವನ ಫೋನ್ ಪೇ ಖಾತೆಗೆ ಹಣವನ್ನು ವರ್ಗಾಯಿಸಬೇಕು. ನಂತರ ಈ ಹಣವನ್ನು ನೀವು ಅಂಗಡಿ ಮಾಲೀಕನ ಬಳಿಯಿಂದ ನಗದು ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
ಯಾವುದೇ ಹೆಚ್ಚಿನ ಶುಲ್ಕ ಪಾವತಿಸುವ ಅಗತ್ಯವಿಲ್ಲ
ಈ ಸೇವೆ ಬಳಸಿ ಗ್ರಾಹಕರು ಹಣ ವಿಥ್ ಡ್ರಾ ಮಾಡುವ ಮಿತಿ ಬ್ಯಾಂಕ್ ಮಿತಿಗೆ ಬದ್ಧವಾಗಿದೆ. ಈ ಸೇವೆಗಾಗಿ ಗ್ರಾಹಕರಿಂದ ಅಥವಾ ಅಂಗಡಿಯವರಿಂದ ಯಾವುದೇ ಹೆಚ್ಚಿನ ಶುಲ್ಕ ಪಡೆಯಲಾಗುವುದಿಲ್ಲ. ಅಂದರೆ ಎರಡೂ ಕಡೆಯಿಂದ ಈ ವ್ಯವಹಾರ ಸಂಪೂರ್ಣ ಶುಲ್ಕ ಮುಕ್ತವಾಗಿರಲಿದೆ. ಅಷ್ಟೇ ಅಲ್ಲ ಅಂಗಡಿ ಮಾಲೀಕರು ಈ ರೀತಿ ಪಡೆದ ಸಂಪೂರ್ಣ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಸೌಲಭ್ಯ ಕೂಡ ಇರಲಿದ್ದು, ಇದಕ್ಕೂ ಕೂಡ ಅವರು ಯಾವುದೇ ರೀತಿಯ ಶುಲ್ಕ ನೀಡುವ ಅಗತ್ಯವಿಲ್ಲ.