‘ಕೈ’ ಪಕ್ಷದ ಭಾರತ್ ಜೋಡೋಗೆ ಕಾಂಗ್ರೆಸ್ ಛೋಡೋ ಎಂದು ಬಿಜೆಪಿ ವ್ಯಂಗ್ಯ

ಪಕ್ಷ ಸಂಕಟದಲ್ಲಿದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ‘ಭಾರತ್‌ ಜೋಡೋ’ ಪಾದಯಾತ್ರೆಗೆ ಹೊರಟಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Written by - Zee Kannada News Desk | Last Updated : May 16, 2022, 04:23 PM IST
  • ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ ಕಾಂಗ್ರೆಸ್‍ನಿಂದ ಈಗ ಹೊಸ ನಾಟಕ
  • ನೆಲಕಚ್ಚಿರುವ ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ!
  • ಕಾಂಗ್ರೆಸ್‌ ಛೋಡೋ ಎಂದಿರುವ ನಾಯಕರು ‘ಭಾರತ್‌ ಜೋಡೋ’ ಯಾತ್ರೆಗೆ ಬರುವರೇ? ಎಂದ ಬಿಜೆಪಿ
‘ಕೈ’ ಪಕ್ಷದ ಭಾರತ್ ಜೋಡೋಗೆ ಕಾಂಗ್ರೆಸ್ ಛೋಡೋ ಎಂದು ಬಿಜೆಪಿ ವ್ಯಂಗ್ಯ  title=
‘ಕೈ’ ಪಕ್ಷದ ‘ಭಾರತ್ ಜೋಡೋ’ ಯಾತ್ರೆಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ಪಕ್ಷದ ಪುನಶ್ಚೇತನಕ್ಕೆ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ್ ಜೋಡೋ ಯಾತ್ರೆಗೆ’ ಕಾಂಗ್ರೆಸ್‌ಛೋಡೋ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ದೇಶವನ್ನು ಭೌಗೋಳಿಕವಾಗಿ ವಿಭಜನೆ ಮಾಡಿದ್ದು ಮಾತ್ರವಲ್ಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಹೊಸ ನಾಟಕ ಮಾಡುತ್ತಿದೆ. ಸೋತು ನೆಲೆ ಕಳೆದುಕೊಂಡು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ ‘ಭಾರತ್ ಜೋಡೋ’ ಹೆಸರಿನಲ್ಲಿ ಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ!’ವೆಂದು ಕುಟುಕಿದೆ.

‘ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶವನ್ನು ಧರ್ಮ, ಜಾತಿ, ಭಾಷೆ ಎಂದು ವಿಭಜಿಸಿತ್ತು. ಅದರ ಪರಿಣಾಮವಾಗಿ ದೇಶದ ಜನತೆ ಅಧಿಕಾರದಿಂದ ಕೆಳಗಿಳಿಸಿದರು, ಈಗ ಅಧಿಕಾರವಿಲ್ಲದ ಹತಾಶೆ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದಕ್ಕಾಗಿ ಭಾರತ್‌ ಜೋಡೋ ಎಂದು ಹೊರಟಿದೆ. ಎಷ್ಟೊಂದು ನಾಟಕ ಮಾಡುವಿರಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: PSI Requirement Scam: ಪಿಎಸ್‌ಐ ಅಕ್ರಮ ಕಿಂಗ್‌ಪಿನ್‌ಗಳ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ!

‘ಬಿತ್ತಿದ್ದೇ ಬೆಳೆಯುತ್ತದೆ! ಅಧಿಕಾರದ ಅಮಲಿನಲ್ಲಿ, ಕುಟುಂಬವಾದದ ಭದ್ರ ಕೋಟೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರು ಜನರಿಂದ ಬಹುದೂರ ಸಾಗಿದ್ದರು. ಕಾಂಗ್ರೆಸ್ ಜನಸಾಮಾನ್ಯರಿಂದ ದೂರವಾಗಿದೆ ಎಂಬ ಸತ್ಯ ಒಪ್ಪಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜನಸಾಮಾನ್ಯರ ನಡುವೆ ದೊಡ್ಡ ಕಂದಕವಿದೆ. ‘ಭಾರತ್ ಜೋಡೋ’ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಗೆದ್ದಾಗ ಇವಿಎಂ ಬಗ್ಗೆ ಮೌನ ವಹಿಸುವ ಕಾಂಗ್ರೆಸ್‌ ಪಕ್ಷ, ಸೋತಾಗ ಮಾತ್ರ ತನ್ನ ಕಳಪೆ ಪ್ರದರ್ಶನವನ್ನು ಇವಿಎಂ ಯಂತ್ರದ ಮೇಲೆ ಕಟ್ಟುತ್ತಾರೆ. ಮತಯಂತ್ರವನ್ನು ದೂಷಿಸಿ ಪಕ್ಷ ಪುನಶ್ಚೇತನಗೊಳಿಸಲು ಸಾಧ್ಯವೇ?’ ಎಂದು ಕಿಡಿಕಾರಿದೆ.

‘ಪಕ್ಷ ಸಂಕಟದಲ್ಲಿ ಇದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ‘ಭಾರತ್‌ ಜೋಡೋ’ ಎಂಬ ಪಾದಯಾತ್ರೆಗೆ ಹೊರಟಿದ್ದಾರೆ. ವಯನಾಡು ತಲುಪುವವರೆಗೆಯಾದರೂ ಈ ಜೋಡಣೆ ಕಾರ್ಯ‌ ನಿರಾತಂಕವಾಗಿ ನಡೆಯುವುದೋ ಅಥವಾ ಮಧ್ಯದಲ್ಲಿ ಇನ್ನೊಂದು ವಿದೇಶ ಪ್ರವಾಸದ ಸಾಧ್ಯತೆ ಇರಬಹುದೋ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ’ ಯಾತ್ರೆಯಲ್ಲಿ #G23 ನಾಯಕರ ಪಾತ್ರವೇನು? ಕಾಂಗ್ರೆಸ್‌ ಛೋಡೋ ಎಂದಿರುವ ನಾಯಕರು ‘ಭಾರತ್‌ ಜೋಡೋ’ ಯಾತ್ರೆಗೆ ಬರುವರೇ? ‘ಭಾರತ್‌ ಜೋಡೋ’ ಕಾರ್ಯಕ್ರಮದ ಬೆನ್ನಲ್ಲೇ #ಕಾಂಗ್ರೆಸ್‌ಛೋಡೋ ಅಭಿಯಾನ ಆರಂಭಗೊಳ್ಳಲಿದೆ! ಸ್ವಾತಂತ್ರದ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೂ ಒಬ್ಬರು. ಸರ್ದಾರ್‌ ಅವರನ್ನೇ ಮರೆತ ಕಾಂಗ್ರೆಸ್‌ ಪಕ್ಷ ‘ಭಾರತ್‌ ಜೋಡೋ’ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಆಪರೇಷನ್ ಕಮಲ’ಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?: ರಾಹುಲ್ ಗಾಂಧಿಗೆ ಎಚ್‍ಡಿಕೆ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News