GIRISH LINGANNA: ಕರ್ನಾಟಕ ಲೋಕಯುಕ್ತ ಸಂಸ್ಥೆ ವಿಚಾರಣೆ ನಡೆಸುತ್ತಿರುವ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಒಳಗೊಂಡ ಪ್ರಕರಣ ಭಾನುವಾರ ಒಂದು ಕೆಟ್ಟ ತಿರುವು ಪಡೆದುಕೊಂಡಿತು. ಸೆಪ್ಟೆಂಬರ್ 28ರಂದು, ವಿಶೇಷ ತನಿಖಾ ದಳ (ಎಸ್ಐಟಿ), ಕರ್ನಾಟಕ ಲೋಕಾಯುಕ್ತ ಸಿಬ್ಬಂದಿಗಳಿಗೆ, ಎಡಿಜಿಪಿ ಎಸ್ಐಟಿ ಎಂ ಚಂದ್ರಶೇಖರ್ ಅವರು ಬರೆದಿರುವ ಪತ್ರ ಇದಕ್ಕೆ ಕಾರಣವಾಯಿತು. ಈ ಪತ್ರದಲ್ಲಿ, ಚಂದ್ರಶೇಖರ್ ಅವರು ತನ್ನ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸುವುದರಿಂದ ಹಿಂಜರಿಯಬಾರದು ಎಂದು ಸಲಹೆ ನೀಡಿದ್ದು, ಕೇಂದ್ರ ಸಚಿವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ ಮತ್ತು ಬೆದರಿಕೆ ಒಡ್ಡಿದ್ದಾರೆ ಎಂದಿದ್ದಾರೆ.
ಹಿಮಾಚಲ ಕೇಡರ್ನ ಐಪಿಎಸ್ ಅಧಿಕಾರಿ, ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಎಡಿಜಿಪಿ) ಹುದ್ದೆಯಲ್ಲಿರುವ, ಲೋಕಾಯುಕ್ತದಡಿಯಲ್ಲಿರುವ ಎಸ್ಐಟಿ ಮುಖ್ಯಸ್ಥರಾಗಿರುವ ಚಂದ್ರಶೇಖರ್ ಅವರು ವಿಚಾರಣೆ ನಡೆಸುತ್ತಿರುವ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆರೋಪಿಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಅಧಿಕಾರಿ 'ಜಾಮೀನಿನಲ್ಲಿರುವ ಆರೋಪಿ' ಎಂದು ಸಂಬೋಧಿಸಿದ್ದು, ತನ್ನ ಅಧಿಕಾರಿಗಳನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ತಾನು ಬರೆದಿರುವ ಪತ್ರದಲ್ಲಿ, ಚಂದ್ರಶೇಖರ್ ಅವರು "ಜಾಮೀನಿನಲ್ಲಿ ಹೊರಗಿರುವ ಆರೋಪಿಯಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ನಮ್ಮನ್ನು ಕರ್ತವ್ಯ ನಿರ್ವಹಿಸುವುದರಿಂದ ವಿಮುಖಗೊಳಿಸುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ. ನನ್ನ ಮೇಲೆ ವಾಗ್ದಾಳಿ ನಡೆಸುವ ಮೂಲಕ ಕುಮಾರಸ್ವಾಮಿ ಎಸ್ಐಟಿ ಅಧಿಕಾರಿಗಳ ಮನದಲ್ಲಿ ಭೀತಿ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಓರ್ವ ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಆತ ಓರ್ವ ಆರೋಪಿಯಷ್ಟೇ. ಇಂತಹ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ನಿರುತ್ಸಾಹಗೊಳ್ಳಬಾರದು" ಎಂದಿದ್ದಾರೆ. ಅದರೊಡನೆ, ಎಂತಹ ಬಾಹ್ಯ ಪ್ರಭಾವದಿಂದಲೂ ತಮ್ಮ ಸಿಬ್ಬಂದಿಯನ್ನು ರಕ್ಷಿಸುವ ಭರವಸೆ ನೀಡಿದ್ದಾರೆ.
ಒಂದು ವೇಳೆ ಚಂದ್ರಶೇಖರ್ ಅವರ ಮಾತುಗಳು ಇಲ್ಲಿಗೇ ನಿಂತಿದ್ದರೆ ಅದನ್ನು ಬಿಟ್ಟುಬಿಡಬಹುದಿತ್ತು. ಆದರೆ, ಈ ಪತ್ರವನ್ನು ನಿಜಕ್ಕೂ ಅನಗತ್ಯ ಎನ್ನುವಂತೆ, ಅದಕ್ಕಿಂತಲೂ ಹೆಚ್ಚಾಗಿ ಅವಹೇಳನಕಾರಿ ಮತ್ತು ಅಸಹ್ಯಕರ ಎಂಬಂತೆ ಮಾಡಿರುವುದು ಅದರ ಎರಡನೇ ಭಾಗ. ಅಲ್ಲಿ ಚಂದ್ರಶೇಖರ್ ಅವರು ಜಾರ್ಜ್ ಬರ್ನಾರ್ಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ಹೇಳಿಕೆಯನ್ನು ಉಲ್ಲೇಖಿಸಿ, 'ಹಂದಿಗಳೊಡನೆ ಕದನಕ್ಕೆ ಇಳಿಯಬೇಡಿ. ಅದರಿಂದ ಇಬ್ಬರೂ ಕೊಳಕಾಗುತ್ತೀರಿ, ಆದರೆ ಹಂದಿ ಅದನ್ನು ಆನಂದಿಸುತ್ತದೆ' ಎಂದು ಬರೆದಿದ್ದಾರೆ.
ಈ ಸಂದರ್ಭದಲ್ಲಿ, ಅತ್ಯಂತ ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿ ಬಳಸಿರುವ ಭಾಷೆ ಮತ್ತು ಕೇಂದ್ರ ಸಚಿವರನ್ನು ಹಂದಿಗೆ ಹೋಲಿಸುವಂತಹ ರೂಪಕವನ್ನು ಬಳಸಿರುವುದು ಅವರ ವೃತ್ತಿಪರತೆಯ ಕುರಿತು ಕಳವಳ ಮೂಡಿಸಿದೆ. ಇಂತಹ ಮಾತನ್ನಾಡಿರುವ ಅಧಿಕಾರಿ ಹೇಗೆ ನ್ಯಾಯವನ್ನು ಎತ್ತಿ ಹಿಡಿಯಲು ಸಾಧ್ಯ? ಕಾನೂನಿನ ಪ್ರಕ್ರಿಯೆ ಹೇಗೇ ಇದ್ದರೂ, ಓರ್ವ ಜನ ಪ್ರತಿನಿಧಿಯ ಕುರಿತು ಇಂತಹ ಅಗೌರವ ತೋರಿರುವುದು ಹೇಗೆ ಸಮಂಜಸ?
ಪೊಲೀಸ್ ಅಧಿಕಾರಿ ಸಚಿವರನ್ನಾಗಲಿ, ಅವರ ಸ್ಥಾನವನ್ನಾಗಲಿ ನೇರವಾಗಿ ಅವಮಾನಿಸಲು ಉದ್ದೇಶಿಸದೆಯೂ ಇರಬಹುದು. ಆದರೆ, ಇಂತಹ ಮಾತುಗಳು ಜನರ ಗ್ರಹಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇದು ಅಧಿಕೃತ ಸಂವಹನವನ್ನು ನಡೆಸುವ ರೀತಿಯಾಗಲಿ, ಭಾಷೆಯಾಗಲಿ ಅಲ್ಲ. ಆರೋಪಗಳ ಕುರಿತು ಮಾತನಾಡುವಾಗ, ಅಧಿಕಾರದ ಹುದ್ದೆಯಲ್ಲಿ ಇರುವವರು ತಮ್ಮ ಮಾತುಗಳ ಕುರಿತು ಬಹಳಷ್ಟು ಜಾಗರೂಕತೆ ಹೊಂದಿರಬೇಕು. ಅವರಿಗೆ ನಾವು ಆಡುವ ಮಾತುಗಳು ನಮ್ಮ ಸ್ಥಾನ ಮತ್ತು ಅದರ ಗೌರವವನ್ನು ಪ್ರತಿನಿಧಿಸುತ್ತವೆ ಎಂಬ ಅರಿವಿರಬೇಕು.
ಇದಕ್ಕೆ ಹಿನ್ನೆಲೆಯಾಗಿ, ಕುಮಾರಸ್ವಾಮಿ ಅವರು ತಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಎಂ ಚಂದ್ರಶೇಖರ್ ಅವರ ಕುರಿತು ಮಾತನಾಡಿದ್ದು, ಅವರು ತನ್ನ ರಾಜಕೀಯ ಮಾಲಿಕರನ್ನು ಮೆಚ್ಚಿಸುವ ಸಲುವಾಗಿ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿದ್ದಾರೆ ಎಂದಿದ್ದರು. ಚಂದ್ರಶೇಖರ್ ಅವರಿಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಹುದ್ದೆಯ ಭರವಸೆ ಸಿಕ್ಕಿದ್ದು, ಇದರಿಂದ ಅವರು ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬೇಕರ್ ಅವರ ಅನುಮತಿಯೊಂದಿಗೆ, 'ರಾಜ ಭವನ ಮತ್ತು ಕರ್ನಾಟಕ ಸರ್ಕಾರದ ನಡುವಿನ ಮಾತುಕತೆಯ ಸೋರಿಕೆಯ' ಕುರಿತು ರಾಜ್ಯಪಾಲರ ಕಾರ್ಯದರ್ಶಿ ಸಿಬ್ಬಂದಿಯ ವಿರುದ್ಧ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದಿದ್ದರು.
ಕುಮಾರಸ್ವಾಮಿ ಅವರು "ತನ್ನ ವಿರುದ್ಧ ಪ್ರಾಸಿಕ್ಯೂಷನ್ ಜಾರಿಗೆ ಕರ್ನಾಟಕ ಸರ್ಕಾರ ಕೋರಿರುವ ವಿವರ ಸೋರಿಕೆಯಾಗಿದೆ ಎಂದಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ, ರಾಜ್ಯಪಾಲರು ಈ ವಿಚಾರ ಹೇಗೆ ಸೋರಿಕೆಯಾಯಿತು ಎಂಬ ಕುರಿತು ಬೆಳಕು ಚೆಲ್ಲುವಂತೆ ಲೋಕಾಯುಕ್ತರನ್ನು ಕೋರಿದ್ದರು ಎಂದಿದ್ದರು. ಆದರೆ, ಈ ತಿಂಗಳು ಚಂದ್ರಶೇಖರ್ ಅವರು ರಾಜ್ಯಪಾಲರ ಕಚೇರಿಯ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದಿದ್ದಾರೆ. ಚಂದ್ರಶೇಖರ್ ಅವರಿಗೆ ರಾಜ್ಯಪಾಲರ ಕಚೇರಿಯ ವಿರುದ್ಧವೇ ವಿಚಾರಣೆ ನಡೆಸುವಂತೆ ಸರ್ಕಾರದ ಅನುಮತಿ ಕೋರುವಷ್ಟು ಧೈರ್ಯವಿದೆ!" ಎಂದು ಕುಮಾರಸ್ವಾಮಿ ಹೇಳಿರುವುದಾಗಿ ದ ಹಿಂದೂ ವರದಿ ಮಾಡಿದೆ.
ಕುಮಾರಸ್ವಾಮಿ ಅವರು ಎಜಿಡಿಪಿ ಅವರು ಕರ್ನಾಟಕದಲ್ಲಿನ ತನ್ನ ನಿಯೋಜನೆಯನ್ನು ಇನ್ನಷ್ಟು ಸುದೀರ್ಘಗೊಳಿಸುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದರೊಡನೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಹಣ ಸುಲಿಗೆ ಮಾಡಿರುವ ಕುರಿತು 2,500ಕ್ಕೂ ಹೆಚ್ಚು ಎಫ್ಐಆರ್ ಎದುರಿಸುತ್ತಿರುವ ವ್ಯಕ್ತಿಯೊಡನೆ ಸೇರಿ ತಂತ್ರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿರುವುದಾಗಿ ಹಿಂದೂ ವರದಿ ಮಾಡಿದೆ. ಕುಮಾರಸ್ವಾಮಿ ತಾನು ಈ ಎಲ್ಲ ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಸಲ್ಲಿಸುವುದಾಗಿಯೂ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.