ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯವಾದ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಹಬ್ಬದ ಸಡಗರ ಜೋರಾಗಿದ್ದು ಅದ್ಧೂರಿ ಗೌರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. 

Written by - Zee Kannada News Desk | Last Updated : Aug 30, 2022, 04:43 PM IST
  • ಕಳೆದ ವರ್ಷ ಹಬ್ಬದ ಸಡಗರಕ್ಕೆ ಕೊರೊನಾ ಅಡ್ಡಿಯಾಗಿತ್ತು‌.
  • ಈ ಬಾರಿ, ಕೊರೊನಾ ಆತಂಕ ಇಲ್ಲದಿರುವುದರಿಂದ ಹಬ್ಬದ ಆಚರಣೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ.
ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು? title=
file photo

ಚಾಮರಾಜನಗರ: ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯವಾದ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಹಬ್ಬದ ಸಡಗರ ಜೋರಾಗಿದ್ದು ಅದ್ಧೂರಿ ಗೌರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. 

ಕಳೆದ ವರ್ಷ ಹಬ್ಬದ ಸಡಗರಕ್ಕೆ ಕೊರೊನಾ ಅಡ್ಡಿಯಾಗಿತ್ತು‌. ಈ ಬಾರಿ, ಕೊರೊನಾ ಆತಂಕ ಇಲ್ಲದಿರುವುದರಿಂದ ಹಬ್ಬದ ಆಚರಣೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ.ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 1913 ರಲ್ಲಿ ಗೌರಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸುಮಾರು 24 ವರ್ಷಗಳ ಹಿಂದೆ ನಾಡಹೆಂಚಿನ ಮನೆಯಂತಿದ್ದ ಗೌರಿ ದೇವಸ್ಥಾನವನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ.

ಎಲ್ಲಡೆ ಒಂದು ದಿನ ಮಾತ್ರ ಗೌರಿ ಹಬ್ಬ ನಡೆದರೆ ಇಲ್ಲಿ 12 ದಿನಗಳ ಕಾಲ ಗೌರಿಯನ್ನು ಕೂರಿಸಿ, ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಬಾಗಿನ ಅರ್ಪಿಸುತ್ತಾರೆ. ಯುವಕ/ಯುವತಿಯರು ಕಂಕಣ ಭಾಗ್ಯಕ್ಕಾಗಿ ಸೇವೆ ಅರ್ಪಿಸುತ್ತಾರೆ. ಈ ಸಂದರ್ಭದಲ್ಲಿ 33 ಹಳ್ಳಿಯ ಭಕ್ತರು ಭಾಗವಹಿಸುತ್ತಾರೆ ಎನ್ನುತ್ತಾರೆ ಸ್ವರ್ಣ ಗೌರಿ ದೇವಸ್ಥಾನದ ದೇವಸ್ಥಾನದ ಅರ್ಚಕರು.

ಗೌರಿ ಪ್ರತಿಷ್ಠಾಪನೆ:

ನಾಡಿನ ಎಲ್ಲೆಡೆ ಹಬ್ಬದ ದಿನ ಗೌರಮ್ಮನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲಿ ಹಬ್ಬದ ಹಿಂದಿನ ದಿನವೇ ದೊಡ್ಡ ಕೆರೆಯ ತಡದಲ್ಲಿ ಮರಳಿನ ಗೌರಿ ವಿಗ್ರಹವನ್ನು ಸಿದ್ಧಪಡಿಸಲಾಗುತ್ತದೆ. ಗೌರಿ ಹಬ್ಬದಂದು ವಿಶೇಷ ಪೂಜೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಮರಳಿನ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ ಹನ್ನೆರಡನೆ ದಿನದವರೆಗೂ ಆ ವಿಗ್ರಹವನ್ನು ಸ್ವರ್ಣ ಗೌರಿ ಎಂದು ವಿಶಿಷ್ಟವಾಗಿ ಪೂಜಿಸುವ ವಾಡಿಕೆ ಇದೆ.

ಇಷ್ಟಾರ್ಥ ಸ್ವರ್ಣ ಗೌರಿ ಎಂದು ಕರೆಸಿಕೊಳ್ಳುವ ಈ ಗೌರಮ್ಮನಿಗೆ 12 ದಿನಗಳವರಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಮಂಗಲಿಯರು ಬಾಗಿನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಊರಿಗೆ ಆಗಮಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News