ಬೆಂಗಳೂರು: ಕನ್ನಡದ ಕವಿಗಳ ಶ್ರೇಷ್ಠ ಭಾವಗೀತೆಗಳನ್ನು ಆಯ್ದು, ಸಂಯೋಜಿಸಿ, ಉಣಬಡಿಸಿದ ಗಾನ ಗಾರುಡಿಗ ಸಿ. ಅಶ್ವತ್ಥ್ ನಮ್ಮನ್ನು ಅಗಲಿ ಅಗಲಿ ಬರೋಬ್ಬರಿ 8 ವರ್ಷಗಳು. ಡಿ.29 ಸಿ.ಅಶ್ವಥ್ ಜನ್ಮದಿನ, ಹಾಗೆಯೇ ಪುಣ್ಯತಿಥಿ ಕೂಡ. ಆಧುನಿಕ ಕನ್ನಡ ಕಾವ್ಯವನ್ನು, ಅದರಲ್ಲೂ ನವೋದಯ ಕಾವ್ಯವನ್ನು, ಕನ್ನಡದ ಮನೆ ಮನೆಗೆ ತಲುಪಿಸಿದವರು ಸಿ ಅಶ್ವಥ್.
ದಾರ್ಶನಿಕ ಶಿಶುನಾಳ ಶರೀಫ್, ರಾಷ್ಟ್ರ ಕವಿ ಕುವೆಂಪು, ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ, ಬಿ. ಆರ್. ಲಕ್ಷ್ಮಣ ರಾವ್ ಸೇರಿದಂತೆ ಹಲವಾರು ಹೆಸರಾಂತ ಸಾಹಿತಿಗಳು ರಚಿಸಿದ ಕವಿತೆಗಳಿಗೆ ರಾಗ ಸಂಯೋಜಿಸಿ, ಹಾಡಿ, ಪ್ರತಿ ಕನ್ನಡಿಗನಿಗೂ ಭಾವಗೀತೆಗಳನ್ನು ಪರಿಚಯಿಸಿದ ಹಿರಿಮೆ ಸಿ. ಅಶ್ವತ್ಥ್ ಅವರದು.
ಡಿಸೆಂಬರ್ 29, 1936ರಂದು ಜನಿಸಿದ ಅಶ್ವತ್ಥ್ ವಿಜ್ಞಾನ ಪದವಿ ಪಡೆದು, 27 ವರ್ಷಗಳ ಕಾಲ ಟೆಲಿಫೋನ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಹಿಂದುಸ್ಥಾನಿ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ದೇವಗಿರಿ ಶಂಕರ್ ಜೋಶಿಯವರ ಶಿಷ್ಯನಾಗಿ ತಮ್ಮ ಸಂಗೀತದ ಬದುಕನ್ನು ಪ್ರಾರಂಭಿಸಿದರು.
ಸಂಯೋಜನೆ ಹಾಗೂ ಹಾಡುಗಾರಿಕೆ ಎರಡರಲ್ಲಿಯೂ ವಿಶಿಷ್ಟತೆ ಹೊಂದಿದ್ದ ಅಶ್ವತ್ಥ್ 75ಕ್ಕೂ ಹೆಚ್ಚು ಅಲ್ಬಂಗಳನ್ನು ಹೊರ ತಂದಿದ್ದಾರೆ. ಸುಗಮ ಸಂಗೀತ ಹಾಗೂ ಭಾವ ಗೀತೆಗಳನ್ನು ಚಲನಚಿತ್ರ ಗೀತೆಗಳಷ್ಟೇ ಪ್ರಸಿದ್ಧಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು.
ಕನ್ನಡ ಸಂಗೀತ ಲೋಕದ ಇತಿಹಾಸದಲ್ಲಿಯೇ ಅಚ್ಚಳಿಯದಂತೆ ಉಳಿದಿರುವ `ಕನ್ನಡವೇ ಸತ್ಯ' ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ಸು ಕೂಡ ಅಶ್ವತ್ಥರದು. ಕರ್ನಾಟಕಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕನ್ನಡ ಭಾವಗಿತೆಗಳ ಕಂಪು ಬಿರುವಂತೆ ಮಾಡಿದವರು ಸಿ.ಅಶ್ವಥ್.