ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ರಾಜಧಾನಿ ಮುಜಫರಾಬಾದ್‌ನಲ್ಲಿ ಇಂದು ನಡೆಯಲಿರುವ ಮೆಗಾ ರ್ಯಾಲಿಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮಾತನಾಡಲಿದ್ದಾರೆ. ಈ ಬಗ್ಗೆ ಸ್ವತಃ ಇಮ್ರಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಮಾಹಿತಿ ಹಂಚಿಕೊಂಡಿದ್ದರು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿರುವ ಭಾರತ ಸರ್ಕಾರದ ವಿರುದ್ಧ ವಿಶ್ವದ ಗಮನ ಸೆಳೆಯಲು ಮುಜಫರಾಬಾದ್‌ನಲ್ಲಿ ನಡೆಯಲಿರುವ 'ಮೆಗಾ ರ್ಯಾಲಿ'ವೊಂದನ್ನು ಉದ್ದೇಶಿಸಿ ಮಾತನಾಡುವುದಾಗಿ ಅವರು ಹೇಳಿದರು.
ಈ ರ್ಯಾಲಿಯನ್ನು ಆಯೋಜಿಸುವ ಮೂಲಕ, ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಲು ಮತ್ತು ಕಾಶ್ಮೀರದ ಜನರೊಂದಿಗೆ ಪಾಕಿಸ್ತಾನ ದೃಢವಾಗಿ ನಿಂತಿದೆ ಎಂದು ಹೇಳಲು ಬಯಸುವುದಾಗಿ ಇಮ್ರಾನ್ ಖಾನ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಗ್ಗೆ ಅಸಮಾಧಾನಗೊಂಡಿರುವ ಇಮ್ರಾನ್, ನಿರಂತರವಾಗಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಪಾಕಿಸ್ತಾನದ ಜನತೆ ಮುಂದೆ ತಮ್ಮ ಅಧಿಕಾರದ ಪ್ರತಿಷ್ಠೆ ಉಳಿಸುಕೊಳ್ಳುವುದು ಇದರ ಹಿಂದಿನ ತಂತ್ರ ಎಂದು ಹೇಳಲಾಗಿದೆ.