Mudhol hound: ಪ್ರಧಾನಿ ಮೋದಿಯವರ SPG ತಂಡಕ್ಕೆ ಸೇರಿದ ಮುಧೋಳ ಶ್ವಾನ

ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆಯಾಗಿರೋ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿವೆ.

Written by - Zee Kannada News Desk | Last Updated : Aug 17, 2022, 08:28 PM IST
  • ಪ್ರಧಾನಿ ಮೋದಿಯವರ ಮನಸೆಳೆದ ಉತ್ತರ ಕರ್ನಾಟಕದ ಮುಧೋಳ ಶ್ವಾನ
  • ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ತಂಡಕ್ಕೆ ಮುಧೋಳ ಶ್ವಾನಗಳ ಸೇರ್ಪಡೆ
  • ಮುಧೋಳದ ಸಂವರ್ಧನಾ ಕೇಂದ್ರದಿಂದ ಅಧಿಕಾರಿಗಳಿಗೆ ಶ್ವಾನಗಳ ಹಸ್ತಾಂತರ
Mudhol hound: ಪ್ರಧಾನಿ ಮೋದಿಯವರ SPG ತಂಡಕ್ಕೆ ಸೇರಿದ ಮುಧೋಳ ಶ್ವಾನ title=
ಪ್ರಧಾನಿ ಮೋದಿ SPG ತಂಡಕ್ಕೆ ಮುಧೋಳ ಶ್ವಾನ

ಬಾಗಲಕೋಟೆ: ಮುಧೋಳ ಶ್ವಾನ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬೇಟೆಗೆ ಹೇಳಿ ಮಾಡಿಸಿದ ಈ ಶ್ವಾನ ತಳಿ ತನ್ನ ಚುರುಕು ಕಾರ್ಯಕ್ಷಮತೆಯಿಂದಲೇ ಹೆಸರುವಾಸಿಯಾಗಿದೆ. ಕರ್ನಾಟಕದ ಹೆಮ್ಮೆಯ ಮಧೋಳ ಶ್ವಾನದ ಖ್ಯಾತಿ ಎಲ್ಲೆಡೆ ಪಸರಿಸಿದೆ. ಇಂತಹ ಮುಧೋಳ ಶ್ವಾನ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಮನಸೆಳೆದಿದೆ.

ಹೌದು, ಕರ್ನಾಟಕದ ಹೆಮ್ಮೆಯ ಮಧೋಳ ಶ್ವಾನವು ಪ್ರಧಾನಿ ಮೋದಿಯವರ ಮನಗೆದ್ದಿದ್ದು, ಅವರ ಭದ್ರತಾ ಪಡೆಯಾಗಿರೋ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ. ಈ ಹಿನ್ನೆಲೆ 2 ಮುಧೋಳ ನಾಯಿ ಮರಿಗಳನ್ನು ಕೊಂಡೊಯ್ದು ಇದೀಗ ದೆಹಲಿಯಲ್ಲಿ ತರಬೇತಿ ನೀಡಲಾಗುತ್ತಿದೆ.

ಮುಧೋಳ ಶ್ವಾನಕ್ಕೆ ಮತ್ತೊಂದು ಗೌರವ ಸಿಕ್ಕಿದ್ದು, ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಪ್ರಧಾನಿ ಮೋದಿಯವರ ಎಸ್‍ಪಿಜಿ ತಂಡದ ಅಧಿಕಾರಿಗಳು ಏಪ್ರಿಲ್ 25ರಂದೇ ಖುದ್ದು ಬಾಗಲಕೋಟೆಗೆ ಭೇಟಿ ನೀಡಿ 2 ತಿಂಗಳ 2 ಗಂಡು ಮುಧೋಳ ನಾಯಿ ಮರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದಲೇ ಈ ಶ್ವಾನಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತೆ 142 ಕೋಟಿ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಇರುವ ಶ್ವಾನ ಸಂವರ್ಧನಾ ಕೇಂದ್ರಕ್ಕೆ ಬಂದಿದ್ದ ಪ್ರಧಾನಿಯವರ ಎಸ್‍ಪಿಜಿ ಭದ್ರತಾ ಪಡೆಯ ಅಧಿಕಾರಿಗಳಿಗೆ 2 ಶ್ವಾನಗಳನ್ನು ಹಸ್ತಾಂತರಿಸಲಾಗಿದೆ. ಧಾರವಾಡ ಹಾಗೂ ಬಾಗಲಕೋಟೆ ಎಸ್‍ಪಿ ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿ ಈ ಕೇಂದ್ರಕ್ಕೆ ವೆಟರ್ನರಿ ವೈದ್ಯ ಡಾ.ಬಿ.ಎಮ್.ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರಬೇತುದಾರರು ಬಂದಿದ್ದರು. ಸಂವರ್ಧನಾ ಕೇಂದ್ರದಲ್ಲಿ 1 ಗಂಟೆಗಳ ಕಾಲ ಶ್ವಾನಗಳ ಪರೀಕ್ಷೆ ನಡೆಸಿದ್ದರು.

ಶ್ವಾನಗಳ ಆರೋಗ್ಯ, ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ದಿ ಮತ್ತು ಚಾಕಚಕ್ಯತೆ ಬಗ್ಗೆ ಅಧಿಕಾರಿಗಳು ಹಾಗೂ ಶ್ವಾನ ತರಬೇತುದಾರರು ತಿಳಿದುಕೊಂಡಿದ್ದರು. ಸಂಪೂರ್ಣ ಪರಿಶೀಲನೆ ಬಳಿಕ 2 ಶ್ವಾನಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಶ್ವಾನಗಳಿಗೆ ಅಗತ್ಯ ತರಬೇತಿ ನೀಡಿದ ಬಳಿಕ ಪ್ರಧಾನಿಯವರ ಎಸ್‍ಪಿಜಿ ಭದ್ರತಾ ಪಡೆಗೆ ಸೇರ್ಪಡೆ ಮಾಡಲಾಗುತ್ತದೆ. ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಗೌಪ್ಯವಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹಿಂದೊಮ್ಮೆ ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ಮೋದಿಯವರು ಮುಧೋಳ ಶ್ವಾನ ತಳಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗಾಗಲೇ ಭಾರತೀಯ ಸೇನೆ, ಸಿಆರ್‍ಪಿಎಫ್, ಐಡಿಬಿಪಿ ಮತ್ತು ವಾಯುಸೇನೆಯಲ್ಲಿ ಮುಧೋಳ ಶ್ವಾನಗಳು ಸೇವೆ ಸಲ್ಲಿಸುತ್ತಿವೆ. ಇದು ಕರ್ನಾಟಕಕ್ಕೆ ಒಂದು ಹೆಮ್ಮೆಯ ವಿಷಯವೆಂದು ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಸುಶಾಂತ ಹಂಡಗೆ ಹೇಳಿದ್ದಾರೆ.    

ಇದನ್ನೂ ಓದಿ: Basavaraj Bommai : 'ಗಣೇಶೋತ್ಸವ ಮುಗಿದ ಮೇಲೆ ಜನೋತ್ಸವ ಮಾಡಲು ನಿರ್ಧಾರ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News