CSK vs RCB, IPL 2022: ಆರ್‌ಸಿಬಿಗೆ ವಿರೋಚಿತ ಸೋಲು, ಖಾತೆ ತೆರೆದ ಚೆನ್ನೈ

ಪ್ರಸಕ್ತ ಟೂರ್ನಿಯಲ್ಲಿ ಸತತ 4 ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದ್ದ ಚೆನ್ನೈ ಗೆಲುವಿನ ಖಾತೆ ತೆರೆದು ಸಂಭ್ರಮಿಸಿತು.

Written by - Zee Kannada News Desk | Last Updated : Apr 13, 2022, 12:30 AM IST
  • ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿದ ಆರ್‌ಸಿಬಿ
  • ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್
  • ಸತತ 4 ಸೋಲುಗಳ ಬಳಿಕ ಗೆಲುವಿನ ಖಾತೆ ತೆರೆದು ಸಂಭ್ರಮಿಸಿದ ರವೀಂದ್ರ ಜಡೇಜಾ ಪಡೆ
CSK vs RCB, IPL 2022: ಆರ್‌ಸಿಬಿಗೆ ವಿರೋಚಿತ ಸೋಲು, ಖಾತೆ ತೆರೆದ ಚೆನ್ನೈ title=
ಗೆಲುವಿನ ಖಾತೆ ತೆರೆದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‍ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್‍ಗಳ ಬೃಹತ್‍ ಮೊತ್ತವನ್ನು ಪೇರಿಸಿತು.

ಬೃಹತ್‍ ಮೊತ್ತವನ್ನು ಚೇಸಿಂಗ್ ಮಾಡಲು ಆರ್‌ಸಿಬಿ ಪ್ರಯತ್ನಿಸಿ ವಿಫಲವಾಯಿತು. ಈ ಮೂಲಕ ಆರ್‌ಸಿಬಿ ಗೆಲುವಿನ ಓಟಕ್ಕೆ ಚೆನ್ನೈ ಬ್ರೇಕ್ ಹಾಕಿತು. ಅಲ್ಲದೇ ಪ್ರಸಕ್ತ ಟೂರ್ನಿಯಲ್ಲಿ ಸತತ 4 ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದ್ದ ಚೆನ್ನೈ ಗೆಲುವಿನ ಖಾತೆ ತೆರೆದು ಸಂಭ್ರಮಿಸಿತು.

ಇದನ್ನೂ ಓದಿ: IPL 2022 : ಪಂದ್ಯ ಸೋತರೂ ವಿಶಿಷ್ಟ ದಾಖಲೆ ಬರೆದ ಹಾರ್ದಿಕ್‌

ಉತ್ತಪ್ಪ, ದುಬೆ ಭರ್ಜರಿ ಬ್ಯಾಟಿಂಗ್

ಇಂದಿನ ಪಂದ್ಯದಲ್ಲಿ ರಾಬಿನ್‌ ಉತ್ತಪ್ಪ ಮತ್ತು ಶಿವಂ ದುಬೆ ಆರ್‌ಸಿಬಿ ಬೌಲರ್‍ಗಳಿಗೆ ಬೆಂಡೆತ್ತಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಜೋಡಿ ಶತಕದ ಜೊತೆಯಾಟವಾಡಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಿತು. ಈ ಇಬ್ಬರೂ ಆಟಗಾರರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸುರಿಮಳೆ ಸುರಿದರು. ಇಬ್ಬರು 165 ರನ್‍ಗಳ ದಾಖಲೆಯ ಜೊತೆಯಾಟವಾಡಿ ತಂಡದ ಮೊತ್ತವನ್ನು 200 ರನ್‌ ಗಡಿ ದಾಟಿಸಿದರು.

ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 4 ಬೌಂಡರಿ ಇದ್ದ 88 ರನ್‌ ಸಿಡಿಸಿ ವನಿಂದು ಹಸರಂಗರಿಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 46 8 ಸಿಕ್ಸರ್ ಮತ್ತು 5 ಬೌಂಡರಿ ಇದ್ದ  95 ರನ್‌ ಬಾರಿಸಿದರು. ಇನ್ನುಳಿದಂತೆ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 17 ರನ್ ಗಳಿಸಿದರು. ಆರ್‌ಸಿಬಿ ಪರ ಬೌಲಿಂಗ್‍ನಲ್ಲಿ ವನಿಂದು ಹಸರಂಗ 2 ವಿಕೆಟ್ ಕಬಳಿಸಿದರೆ, ಜೋಶ್ ಹ್ಯಾಜಲ್‍ವುಡ್ 1 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: IPL 2022: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ ಈಗ ಐಪಿಎಲ್ ಹೀರೋ!

ರನ್ ಚೇಸ್ ಮಾಡಿ ವಿಫವಾದ ಆರ್‌ಸಿಬಿ 

217 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ ಭರ್ಜರಿ ಚೇಸಿಂಗ್ ನಡೆಸಿತು. ಆದರೆ ಚೆನ್ನೈ ತಂಡದ ಬೌಲಿಂಗ್‍ಗೆ ದಾಳಿಗೆ ಸಿಲುಕಿ ಸೋಲು ಕಂಡಿತು. ಆರ್‌ಸಿಬಿ ಪರ ಶಹಬಾಜ್ ಅಹ್ಮದ್(41), ಸುಯಶ್ ಪ್ರಭುದೇಸಾಯಿ(34), ದಿನೇಶ್ ಕಾರ್ತಿಕ್(34), ಗ್ಲೇನ್ ಮ್ಯಾಕ್ಸ್‍ವೆಲ್(26), ಮೊಹಮ್ಮದ್ ಸಿರಾಜ್(14) ಮತ್ತು ಅಂಜು ರಾವತ್(12) ರನ್ ಗಳಿಸಿದರು. ಅಂತಿಮವಾಗಿ 20 ಓವರ್‍ಗಳಲ್ಲಿ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು 193 ರನ್‍ ಗಳಿಸಲಷ್ಟೇ ಶಕ್ತವಾಯಿತು. ಸಿಎಸ್‌ಕೆ ಪರ ಮಹೇಶ ತೀಕ್ಷಣ 4 ವಿಕೆಟ್‌ ಪಡೆದರೆ, ನಾಯಕ ರವೀಂದ್ರ ಜಡೇಜ 3 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಮುಖೇಶ್ ಚೌಧರಿ ಹಾಗೂ ಡ್ವೇನ್ ಬ್ರಾವೋ ತಲಾ ಒಂದೊಂದು ವಿಕೆಟ್ ಗಳಿಸಿದರು.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News