ಬೆಂಗಳೂರು: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಏಪ್ರಿಲ್ 17ರಂದು ನಡೆದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಶೀದ್ ಖಾನ್ ನಾಯಕತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದೆ. ಈ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದ ಗುಜರಾತ್, ಚೆನ್ನೈಗೆ ಮತ್ತೆ ಸೋಲಿನ ರುಚಿ ತೋರಿಸಿದೆ.
ಇದನ್ನು ಓದಿ: IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್
ಟೂರ್ನಿಯಲ್ಲಿನ ಮೊದಲ 4 ಪಂದ್ಯಗಳಲ್ಲಿ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಕಂಡಿತ್ತು. ಈ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಆದರೆ, ತನ್ನ ಆರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನ್ನು ಅನುಭವಿಸಿ ಮತ್ತೆ ಎಡವಿದೆ.
ಈ ಪಂದ್ಯವು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ರಶೀದ್ ಖಾನ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ರುತುರಾಜ್ ಗಾಯಕ್ವಾಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಸಹಾಯದಿಂದ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ 3 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದು ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇನ್ನು ರಾಬಿನ್ ಉತ್ತಪ್ಪ 10 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 1 ರನ್, ಅಂಬಾಟಿ ರಾಯುಡು 31 ಎಸೆತಗಳಲ್ಲಿ 46 ರನ್ ಮತ್ತು ಶಿವಂ ದುಬೆ 17 ಎಸೆತಗಳಲ್ಲಿ 19 ರನ್ ಸಿಡಿಸಿದರು. ತಂಡದ ನಾಯಕ ರವೀಂದ್ರ ಜಡೇಜಾ 12 ಎಸೆತಗಳಲ್ಲಿ 22 ರನ್ ಬಾರಿಸಿ ಅಜೇಯರಾಗಿ ಉಳಿದರು. ಇನ್ನು ಗುಜರಾತ್ ಟೈಟಾನ್ಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.
ಇದನ್ನು ಓದಿ: ಆರ್ಸಿಬಿ ಆಟಗಾರರಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋ..!
ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 170 ರನ್‌ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಸಹ ಆ ಬಳಿಕ ಉತ್ತಮವಾಗಿ ಆಡಿದ್ದರು. ವೃದ್ದಿಮಾನ್ ಸಹಾ 11, ಶುಭ್ಮನ್ ಗಿಲ್ 0, ವಿಜಯ್ ಶಂಕರ್ 0 ಮತ್ತು ಅಭಿನವ್ ಮನೋಹರ್ 12 ರನ್ ಗಳಿಸಿ ನೀರಸ ಪ್ರದರ್ಶನ ತೋರಿದರು. ಆ ಬಳಿಕ ತಂಡಕ್ಕೆ ಆಸರೆಯಾದದ್ದು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ಮಿಲ್ಲರ್ ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಶೀದ್ ಖಾನ್. ರಶೀದ್ ಖಾನ್ 21 ಎಸೆತಗಳಲ್ಲಿ 40 ರನ್ ಕಲೆ ಹಾಕಿದರೆ, ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ ಅಜೇಯ 94 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೊ 3 ವಿಕೆಟ್, ಮಹೀಶ್ ತೀಕ್ಷಣ 2 ವಿಕೆಟ್ ಮತ್ತು ರವೀಂದ್ರ ಜಡೇಜಾ ಹಾಗೂ ಮುಕೇಶ್ ಚೌಧರಿ ತಲಾ ಒಂದು ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.