ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಗುರುವಾರ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್ಗಳ ಅಮೋಘ ಜಯ ಸಾಧಿಸಿ, ಸೆಮಿಫೈನಲ್ ಹಂತದತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿತು.
ವೆಸ್ಟ್ಇಂಡೀಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 268 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಗೆ 269 ರನ್ ಗಳ ಗುರಿ ನೀಡಿತು. ಭಾರತ ತಂಡದ ಗುರಿ ಬೆನ್ನತ್ತಿದ ವಿಂಡೀಸ್ 34 .2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 143 ರನ್ ಗಳನ್ನು ಕಲೆಹಾಕಲು ಮಾತ್ರ ಶಕ್ತವಾಯಿತು.
ಐಸಿಸಿ ವಿಶ್ವಕಪ್ 2019 ರಲ್ಲಿ ವೆಸ್ಟ್ಇಂಡೀಸ್ ಹೊರದಬ್ಬಿ ಸೆಮೀಸ್ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. 11 ಅಂಕಗಳನ್ನು ಕಲೆ ಹಾಕಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ.
ಐಸಿಸಿಯ ಅಂಕಪಟ್ಟಿಯಲ್ಲಿ ಪ್ರಸ್ತುತ, ಆಸ್ಟ್ರೇಲಿಯಾ (12), ಭಾರತ (11), ನ್ಯೂಜಿಲೆಂಡ್ (11) ಮತ್ತು ಇಂಗ್ಲೆಂಡ್ (8) ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ, ಭಾರತ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ನ್ಯೂಜಿಲೆಂಡ್ನ ಸ್ಥಾನ ಕೂಡ ಬಹುತೇಕ ಖಚಿತವಾಗಿದೆ. ಈಗ ಈ ಮೂವರಲ್ಲಿ, ಪ್ರಥಮ ಸ್ಥಾನ ಗಳಿಸುವವರು ಯಾರು ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇಂಗ್ಲೆಂಡ್ನ ಹೊರತಾಗಿ ಬಾಂಗ್ಲಾದೇಶ (7), ಪಾಕಿಸ್ತಾನ (7) ಮತ್ತು ಶ್ರೀಲಂಕಾ (6) ಕೂಡ ಸೆಮಿಫೈನಲ್ ತಲುಪುವ ತವಕದಲ್ಲಿವೆ.