ಪಾಟ್ನಾ: ಬಿಹಾರದಲ್ಲಿ ನಕಲಿ ಮದ್ಯ(Fake Liquor) ಸೇವಿಸಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ದೀಪಾವಳಿ ಸಂಭ್ರಮದ ನಡುವೆಯೇ ಬಿಹಾರದ ಎರಡು ಜಿಲ್ಲೆಗಳಲ್ಲಿ ಈ ದುರ್ಘಟನೆ ನಡೆದಿದ್ದು, ಸೂತಕದ ವಾತಾವರಣ ನಿರ್ಮಾಣವಾಗಿದೆ. ಪಶ್ಚಿಮ ಚಂಪಾರಣ್‌ನ ಗೋಪಾಲ್‌ಗಂಜ್‌ನಲ್ಲಿ 10 ಮತ್ತು ಬೆಟ್ಟಿಯಾ ಜಿಲ್ಲೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಹಮ್ಮದ್‌ಪುರ ಪೊಲೀಸ್ ಠಾಣೆ(Mohammadpur Police Station) ವ್ಯಾಪ್ತಿಯ ಮೊಹಮ್ಮದ್‌ಪುರ, ಕುಶಾರ್ ಮತ್ತು ತುಹ್ರಾ ಟೋಲಾ ಎಂಬ 3 ಗ್ರಾಮಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆಂದು ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ನವಲ್ ಕಿಶೋರ್ ಚೌಧರಿ ಖಚಿತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೆಟ್ಟಿಯಾ ಜಿಲ್ಲಾಡಳಿತವು ನಕಲಿ ಮದ್ಯ ಸೇವನೆಯಿಂದ 8 ಜನರು ಸಾವನ್ನಪ್ಪಿರುವ ಬಗ್ಗೆ ಖಚಿತಪಡಿಸಿದೆ. ಮಂಗಳವಾರ ಸಂಜೆ ನಿರ್ಬಂಧಿತ ಮದ್ಯವನ್ನು ಸೇವಿಸಿದ ಅನೇಕರು ಅಸ್ವಸ್ಥರಾಗಿದ್ದರು. ಕಳೆದ 2 ದಿನಗಳಲ್ಲಿ ಅನೇಕರು ಸಾವನ್ನಪ್ಪಿದ್ದು, 7 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಪೈಕಿ ನಾಲ್ವರು ದೃಷ್ಟಿ ಕಳೆದುಕೊಂಡಿದ್ದಾರೆ. ‘ಯಾರಾದರೂ ಈ ರೀತಿಯ ಮದ್ಯ ಸೇವಿಸಿದ್ದರೆ ದಯವಿಟ್ಟು ತಿಳಿಸಿ, ಅವರಿಗೆ ಅಗತ್ಯ ಚಿಕಿತ್ಸೆ ನೀಡಿ ಜೀವ ಉಳಿಸಲಾಗುವುದು ಎಂದು ಈ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡುತ್ತಿದ್ದೇವೆ’ ಅಂತಾ ಚೌಧರಿಯವರು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ 32 ವಿದ್ಯಾರ್ಥಿಗಳು ಅಸ್ವಸ್ಥ
ಸಾವಿನ ಅಂಕಿಅಂಶಗಳನ್ನು ಸರ್ಕಾರ ಮರೆಮಾಚುತ್ತಿದೆ
ಬಿಹಾರದಲ್ಲಿ ಅಕ್ರಮ ಮದ್ಯ(Liquor Mafiya In Bihar) ಸೇವನೆಯಿಂದ ಸಾಮೂಹಿಕ ಸಾವು ಸಂಭವಿಸಿದ ನಂತರ ಪ್ರತಿಪಕ್ಷ ಆರ್‌ಜೆಡಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮಾತನಾಡಿ, ‘ಈ ಎಲ್ಲಾ ಸಾಮೂಹಿಕ ಸಾವುಗಳಿಗೆ ನಿತೀಶ್ ಕುಮಾರ್ ಸರ್ಕಾರ ಹೊಣೆಯಲ್ಲವೇ? ನಿತೀಶ್ ಕುಮಾರ್ ಸರ್ಕಾರ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ’ ಎಂದು ಆರೋಪಿಸಿದ್ದಾರೆ. ‘ನಮ್ಮ ಮಾಹಿತಿಯ ಪ್ರಕಾರ ಒಂದು ವಾರದ ಹಿಂದೆ ಗೋಪಾಲ್‌ಗಂಜ್‌ನಲ್ಲಿ 20, ಬೆಟ್ಟಿಯಾದಲ್ಲಿ 13 ಮತ್ತು ಮುಜಾಫರ್‌ಪುರ ಜಿಲ್ಲೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಸತ್ಯಾಂಶ ಮರೆಮಾಚಲು ಜಿಲ್ಲಾಡಳಿತ ಯಾವುದೇ ಮರಣೋತ್ತರ ಪರೀಕ್ಷೆ ನಡೆಸದೆ ಮೃತದೇಹಗಳನ್ನು ಸುಡುತ್ತಿದೆ’ ಅಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್ ನೇರ ಹೊಣೆ: ತೇಜಸ್ವಿ
ತೇಜಸ್ವಿ ಯಾದವ್ ಮಾತನಾಡಿ, ಉಪಚುನಾವಣೆ ಸಂದರ್ಭದಲ್ಲಿ ಜೆಡಿಯು ಮುಖಂಡರು ನಿತೀಶ್ ಕುಮಾರ್(Nitish Kumar) ಜೊತೆ ಶಾಮೀಲಾಗಿ ಮತದಾರರಿಗೆ ನಕಲಿ ಮದ್ಯ ಹಂಚಿದ್ದರು. ಇದು ಬೇರೆ ಜಿಲ್ಲೆಗಳಿಗೂ ತಲುಪಿದೆ. ಆದ್ದರಿಂದ ನಕಲಿ ಮದ್ಯ ಸೇವನೆಯಿಂದ ಉಂಟಾಗಿರುವ ಸಾಮೂಹಿಕ ಸಾವುಗಳಿಗೆ ನಿತೀಶ್ ಕುಮಾರ್ ನೇರ ಹೊಣೆಯಾಗುತ್ತಾರೆ. ಅವರು ಬಿಹಾರದಲ್ಲಿ ಮದ್ಯ ನಿಷೇಧ ಮಾಡುತ್ತೇವೆಂದು ಪ್ರತಿಪಾದಿಸುತ್ತಿದ್ದಾರೆ, ಆದರೆ ಅದು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಮದ್ಯದ ಮಾಫಿಯಾ 20,000 ಕೋಟಿ ರೂ.ಗಳ ಅಕ್ರಮ ವಹಿವಾಟು ನಡೆಸುತ್ತಿದೆ. ನಿತೀಶ್ ಕುಮಾರ್ ಅವರೇ ಇದರ ಕಿಂಗ್ ಪಿನ್. ಇದರ ಬಗ್ಗೆ ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು’ ಅಂತಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಉದ್ಯಮಿ ಮನೆಯಿಂದ ಎರಡು ಕೋಟಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು
ನಿತೀಶ್ ವಿರುದ್ಧ ಲಾಲೂ ಪ್ರಸಾದ್ ಯಾದವ್ ವಾಗ್ದಾಳಿ
‘ನಿತೀಶ್ ಕುಮಾರ್(Nitish Kumar) ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಸರಕುಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಮೂಲಕ ಜನರ ಬೆನ್ನುಮೂಳೆಯನ್ನು ಮುರಿದಿದೆ. ಮುಜಾಫರ್‌ಪುರ, ಗೋಪಾಲ್‌ಗಂಜ್ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿ 50 ಜನರು ಸಾವನ್ನಪ್ಪಿದ್ದಾರೆ. ಆದರೆ ಸಂತ್ರಸ್ತರಿಗೆ ನಿತೀಶ್ ಸಾಂತ್ವನವನ್ನೇ ಹೇಳಿಲ್ಲ’ವೆಂದು ಲಾಲೂ ಟ್ವೀಟ್ ಮಾಡಿದ್ದಾರೆ. ಉಪಚುನಾವಣೆ(Bihar Byelection) ವೇಳೆ ಕಳೆದ ಒಂದು ವಾರದಲ್ಲಿ ನಕಲಿ ಮದ್ಯ ಹಂಚಿಕೆ ಮಾಡಿದ್ದರಿಂದ ಈ ದುರಂ ಸಂಭವಿಸಿದೆ. ನಕಲಿ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಆದರೂ ನಿತೀಶ್ ಕುಮಾರ್ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿಲ್ಲವೆಂದು ಅವರು ಕಿಡಿಕಾರಿದ್ದಾರೆ. ಏತನ್ಮಧ್ಯೆ ಪಾಟ್ನಾ ಪೊಲೀಸರು ಗುರುವಾರ ಪಾಟ್ನಾ ನಗರ ಪ್ರದೇಶದಲ್ಲಿ 50 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ