ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಪ್ರಕರಣಗಳು ಸರ್ಕಾರವನ್ನು ಅಕ್ಷರಶಃ ಕಳವಳಕ್ಕೆ ದೂಡಿದೆ. ಶನಿವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಫೇಸ್‌ಬುಕ್ ಲೈವ್ ಮೂಲಕ ಪತ್ರಕರ್ತರೊಂದಿಗೆ ಸಂವಾದ ನಡೆಸಿ ದೆಹಲಿಯಲ್ಲಿ ಕರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಅದರ ವಿರುದ್ದ ಹೋರಾಡಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದರು.
ದೆಹಲಿಯಲ್ಲಿ ಕರೋನಾ ಕೋವಿಡ್ -19 (Covid-19) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಆದರೆ ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ನಮ್ಮ ಸರ್ಕಾರವು ಕರೋನಾವೈರಸ್‌ಗಿಂತ ನಾಲ್ಕು ಹೆಜ್ಜೆ ಮುಂದಿದೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು.
ಇನ್ನೂ ಒಂದೆರಡು ತಿಂಗಳು ಲಾಕ್‌ಡೌನ್ ಜಾರಿಗೊಳಿಸಿದರೆ ನಂತರ ಕರೋನಾ ಗುಣಮುಖವಾಗಲಿದೆ ಎಂದು ಇಂದು ಯಾರೂ ಹೇಳಲಾರರು. ಕರೋನಾ ಸದ್ಯಕ್ಕೆ ಗುಣವಾಗುವ ಸಾಧ್ಯತೆ ಅತಿ ವಿರಳ. ಅದಕ್ಕೆ ಉತ್ತಮ ಮಾರ್ಗವೆಂದರೆ ಕರೋನಾವೈರಸ್ ಗೆ ಲಸಿಕೆ ಸಿಗುವವರೆಗೂ ಸಾಮಾಜಿಕ ಅಂತರದ ಮೂಲಕ ನಮ್ಮ ಬಗ್ಗೆ ನಾವೇ ಕಾಳಜಿ ವಹಿಸಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದರು.
#WATCH: "Most of the people are recovering, and they are recovering at home. There is no need to panic," says Delhi CM Arvind Kejriwal #COVID19 pic.twitter.com/92ELnfqgKV
— ANI (@ANI) May 30, 2020
ಈ ಸಮಯದಲ್ಲಿ ನಮ್ಮ ಇಡೀ ಸರ್ಕಾರ ಕರೋನಾದ ರೋಗಿಗಳಿಗೆ ಚಿಕಿತ್ಸೆ ನೀಡುವತ್ತ ಗಮನ ಹರಿಸುತ್ತಿದೆ ಎಂದು ತಿಳಿಸಿದ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ನಾನು ಎರಡು ವಿಷಯಗಳ ಬಗ್ಗೆ ಚಿಂತಿಸುತ್ತಿದ್ದೇನೆ. ಮೊದಲನೆಯದು ದೆಹಲಿಯಲ್ಲಿ ಕರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದರೆ ಎಂಬುದು ಮತ್ತು ಎರಡನೆಯದಾಗಿ ಕರೋನಾ ರೋಗಿಗಳ ಸಂಖ್ಯೆ 10,000 ದಾಟಿದ್ದು ನಮ್ಮಲ್ಲಿ ಇರುವುದು ಕೇವಲ 8,000 ಹಾಸಿಗೆಗಳು ಅದು ನಮಗೆ ಕಳವಳಕಾರಿ ಸಂಗತಿಯಾಗಿದೆ ಎಂದರು.
ದೆಹಲಿಯಲ್ಲಿ ಇಂದು 17,386 ಕರೋನಾ ವೈರಸ್ ಪ್ರಕರಣಗಳಿದ್ದು, ಈ ಪೈಕಿ 2,100 ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಉಳಿದವರೆಲ್ಲರೂ ಮನೆಯೊಳಗೆ ಇದ್ದಾರೆ, ಅವರು ಮನೆಯೊಳಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ 5 ರೊಳಗೆ ದೆಹಲಿಯಲ್ಲಿ 9,500 ಹಾಸಿಗೆಗಳು ಸಿದ್ಧವಾಗುತ್ತವೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು
ಕರೋನಾ ಸಂಬಂಧಿತ ಆ್ಯಪ್ ಮಾಡಲಾಗಿದೆ, ಅದರ ಪರೀಕ್ಷೆ ಈಗ ನಡೆಯುತ್ತಿದ್ದು ಸೋಮವಾರ ಇದನ್ನು ಲಾಂಚ್ ಮಾಡಲಾಗುವುದು. ಆ ಅಪ್ಲಿಕೇಶನ್‌ನಲ್ಲಿ ನೀವು ಪ್ರತಿ ಆಸ್ಪತ್ರೆಯ ಡೇಟಾವನ್ನು ಪಡೆಯುತ್ತೀರಿ, ಎಷ್ಟು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳು ಯಾವ ಆಸ್ಪತ್ರೆಯಲ್ಲಿವೆ ಮತ್ತು ಎಷ್ಟು ಖಾಲಿಯಾಗಿವೆ ಎಂಬ ಎಲ್ಲಾ ಮಾಹಿತಿಗಳು ಇದರಲ್ಲಿ ಲಭ್ಯವಾಗಲಿದೆ. ಇದು ರೋಗಿಗಳಿಗೆ ಹತ್ತಿರದ ಆಸ್ಪತ್ರೆಗೆ ತಲುಪಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.