ಮಾತುಕತೆಗೆ ಬರುವಂತೆ ರೈತರಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಪ್ರತಿಭಟನಾ ನಿರತ ರೈತರು ಹೊಸ ಕಾನೂನುಗಳು ಕನಿಷ್ಟ ಬೆಂಬಲ ಬೆಲೆಯ ವ್ಯವಸ್ಥೆಗೆ ಮಾರಕವಾಗಿವೆ. ಈಗಿರುವ ಮಂಡಿ ವ್ಯವಸ್ಥೆಯನ್ನು ತೆಗೆದುಹಾಕಲಾಗುತ್ತದೆ. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಕೃಷಿ ಕ್ಷೇತ್ರವನ್ನು ಆವರಿಸಿಕೊಂಡು ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

Written by - Yashaswini V | Last Updated : Dec 21, 2020, 08:11 AM IST
  • ಮಾತುಕತೆಗೆ ಸೂಕ್ತ ದಿನಾಂಕ ತಿಳಿಸುವಂತೆ ಪತ್ರದಲ್ಲಿ ಮನವಿ
  • ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರಿಂದ ಪತ್ರ
ಮಾತುಕತೆಗೆ ಬರುವಂತೆ ರೈತರಿಗೆ ಪತ್ರ ಬರೆದ ಕೇಂದ್ರ ಸರ್ಕಾರ title=
Central government writes letter to farmers (File Image)

ನವದೆಹಲಿ: ಮುಂದಿನ ಸುತ್ತಿನ ಮಾತುಕತೆಗೆ ಆಹ್ವಾನಿಸಿ ಪ್ರತಿಭಟನಾ ನಿರತ ರೈತ ಸಂಘಗಳಿಗೆ ಕೇಂದ್ರ ಸರ್ಕಾರ ಭಾನುವಾರ ಪತ್ರ ಬರೆದು ತಮಗೆ ಅನುಕೂಲಕರವಾಗುವ ದಿನಾಂಕವನ್ನು ತಿಳಿಸುವಂತೆ ಕೇಳಿಕೊಂಡಿದೆ.

ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು ರೈತ ಸಂಘಟನೆಗಳ ನಾಯಕರಿಗೆ ಬರೆದ ಪತ್ರದಲ್ಲಿ, "ಆಹ್ವಾನಿತ ಪ್ರತಿಭಟನಾ ನಿರತ ಯೂನಿಯನ್ ಮುಖಂಡರು ತಮಗೆ ಇರುವ ಕಾಳಜಿ ಮತ್ತು ಅನುಮಾನಗಳ ವಿವರಗಳನ್ನು ನೀಡುವಂತೆ ವಿನಂತಿಸುತ್ತೇನೆ ಮತ್ತು ಮುಂದಿನ ಸುತ್ತಿನ ಮಾತುಕತೆಗೆ ಅನುಕೂಲವಾಗುವಂತೆ ದಿನಾಂಕವನ್ನು ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ಕಾನೂನುಗಳು ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿವೆ. ಕೂಡಲೇ ಅವುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಲಕ್ಷಾಂತರ ರೈತರು (Farmers) ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಪುಷ್ಠಿ ನೀಡುತ್ತಲಿದ್ದಾರೆ. ಜೊತೆಗೆ ರೈತರ ಪ್ರತಿಭಟನೆಗೆ ಬೇರೆ ಬೇರೆ ವರ್ಗದ ಜನರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿದೆ.

ಕೇಂದ್ರ ಸರ್ಕಾರ (Central Government) ಮತ್ತು ರೈತ ಸಂಘಟನೆಗಳ ನಡುವೆ ಈಗಾಗಲೇ 5 ಸುತ್ತು ಮಾತುಕತೆ ನಡೆದಿವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವುದಿಲ್ಲ ಎಂದು ಹಠಮಾರಿತನ ಪ್ರದರ್ಶಿಸುತ್ತಿರುವುದರಿಂದ 5 ಮಾತುಕತೆಗಳು ವಿಫಲವಾಗಿವೆ. ಮುಂದಿನ ಸಭೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಕರೆಯಲು ಸರ್ಕಾರ ಉದ್ದೇಶಿಸಿದೆ.‌ 

ಇದನ್ನೂ ಓದಿ: ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್​

ಈ ಸಭೆಯಿಂದ ಸಮಸ್ಯೆ ಬೇಗನೆ ಕೊನೆಗೊಳ್ಳುತ್ತವೆ ಎಂದು ಅಗರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ. ರೈತರು ಹೇಳುತ್ತಿರುವ ಎಲ್ಲಾ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಪರಿಹರಿಸಲು ಸೂಕ್ತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ಪ್ರತಿಭಟನಾ ನಿರತ ರೈತರು ಹೊಸ ಕಾನೂನುಗಳು ಕನಿಷ್ಟ ಬೆಂಬಲ ಬೆಲೆಯ ವ್ಯವಸ್ಥೆಗೆ (MSP) ಮಾರಕವಾಗಿವೆ. ಈಗಿರುವ ಮಂಡಿ ವ್ಯವಸ್ಥೆಯನ್ನು ತೆಗೆದುಹಾಕಲಾಗುತ್ತದೆ. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಕೃಷಿ ಕ್ಷೇತ್ರವನ್ನು ಆವರಿಸಿಕೊಂಡು ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Farmers Protest: ಕೃಷಿ ಸಚಿವರ ಪತ್ರ, ನಂತರ ಪ್ರಧಾನಿ ಮೋದಿ ಮನವಿ

ರಿಲೇ ಉಪವಾಸ ಸತ್ಯಾಗ್ರಹ:
ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ರೈತ ಸಂಘಗಳು ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿ ಸೋಮವಾರ ಒಂದು ದಿನದ 'ರಿಲೇ ಉಪವಾಸ ಸತ್ಯಾಗ್ರಹ'ವನ್ನು ಘೋಷಿಸಿವೆ. ಪಂಜಾಬ್ ಮತ್ತು ಹರಿಯಾಣದ ರೈತರು ಮತ್ತು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಾನುವಾರ 'ಶ್ರದ್ಧಾಂಜಲಿ ದಿವಾಸ್' ಆಚರಿಸಿ ತಮ್ಮ ಸಹೋದರರಿಗೆ "ನಡೆಯುತ್ತಿರುವ ಆಂದೋಲನದಲ್ಲಿ ಸಾವನ್ನಪ್ಪಿದರು" ಎಂದು ಗೌರವ ಸಲ್ಲಿಸಿದರು.

ಹೃದಯಾಘಾತಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ 30ಕ್ಕೂ ಹೆಚ್ಚು ಪ್ರತಿಭಟನಾ ನಿರತ ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆಗಳು‌ ತಿಳಿಸಿವೆ. ಹೇಳಿಕೊಂಡಿವೆ. ರೈತರು 'ಅರ್ದಾಸ್' (ಪ್ರಾರ್ಥನೆ) ನಡೆಸಿದರು ಮತ್ತು ಕೆಲವು ಸ್ಥಳಗಳಲ್ಲಿ ಅವರು ಕೇಂದ್ರದ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.

"ಹೊಸ ಕೃಷಿ ಕಾನೂನುಗಳ (Agriculture laws) ವಿರುದ್ಧ ಪ್ರತಿಭಟನೆಯ ಎಲ್ಲಾ ಸ್ಥಳಗಳಲ್ಲಿ ರೈತರು ಸೋಮವಾರ ದಿನವಿಡೀ ರಿಲೇ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಲಿದ್ದಾರೆ. ಇದನ್ನು 11 ಸದಸ್ಯರ ತಂಡವು ಪ್ರತಿಭಟನಾ ಸ್ಥಳಗಳಲ್ಲಿ ಪ್ರಾರಂಭಿಸುತ್ತದೆ" ಎಂದು ಸ್ವರಾಜ್ ಭಾರತದ ಮುಖ್ಯಸ್ಥ ಯೋಗೇಂದ್ರ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶಾದ್ಯಂತ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿತುವ ರೈತರು ಆಯಾ ಪ್ರತಿಭಟನಾ ಸ್ಥಳಗಳಲ್ಲಿ ದಿನವಿಡೀ ಉಪವಾಸ ಸತ್ಯಾಗ್ರಹವನ್ನು ಆಚರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 'ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ': ರೈತರಿಗೆ ಪ್ರಧಾನಿ ಮೋದಿ ಮನವಿ

ರೈತ ಮುಖಂಡ ಜಗ್ಜೀತ್ ಸಿಂಗ್ ದಾಲೆವಾಲಾ ಮಾತನಾಡಿ, ಡಿಸೆಂಬರ್ 25 ರಿಂದ 27 ರವರೆಗೆ ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರೈತರು ಅವಕಾಶ ನೀಡುವುದಿಲ್ಲ. "ಡಿಸೆಂಬರ್ 25 ರಿಂದ 27 ರವರೆಗೆ ಹರಿಯಾಣದ ಎಲ್ಲಾ ಟೋಲ್ ಬೂತ್‌ಗಳನ್ನು ಟೋಲ್ ಸಂಗ್ರಹಿಸಲು ನಮಗೆ ಅನುಮತಿಸಲಾಗುವುದಿಲ್ಲ. ನಾವು ಅವುಗಳನ್ನು ತಡೆಯುತ್ತೇವೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News