ಪಾನಿಪೂರಿ ತಿಂದೂ ಹೋದ, 30 ಸಾವಿರ ಕೊಂಡೂ ಹೋದ! ವ್ಯಾಪಾರಿಗೆ ಖಾತೆಗೆ ಕನ್ನ ಹಾಕಿದವ ಏನಾದ ಗೊತ್ತಾ?

ಗೆಳೆಯರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಆರೋಪಿ ಯುವಕ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿನ‌ ಲೋಕೇಶ್ ಎಂಬವರ ಪಾನಿಪೂರಿ ಅಂಗಡಿಗೆ ತೆರಳಿ ಸ್ನೇಹಿತರ ಜೊತೆ ಮೂರು ಪ್ಲೇಟ್ ಪಾನಿಪೂರಿ ತಿಂದಿದ್ದಾನೆ‌. ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿ ವ್ಯಾಪಾರಿ ಫೋನ್ ಪಡೆದು ಬೇರೊಬ್ಬನಿಗೆ ಕರೆ ಮಾಡಿದ್ದಾನೆ.

Written by - Zee Kannada News Desk | Edited by - Bhavishya Shetty | Last Updated : Feb 13, 2023, 09:40 PM IST
    • ಯುವಕನೋರ್ವ ಪಾನಿಪೂರಿ ತಿಂದಿದ್ದೂ ಅಲ್ಲದೇ ವ್ಯಾಪಾರಿಗೆ ಖಾತೆಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದಾನೆ
    • ಇದೀಗ ಆತ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ
    • ಅವರಿವರ ಮುಂದೆ ಪಾಸ್ ವರ್ಡ್ ಒತ್ತುವ ಮುನ್ನ ಎಚ್ಚರಿಕೆ ಎಷ್ಟು ಅವಶ್ಯಕ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ
ಪಾನಿಪೂರಿ ತಿಂದೂ ಹೋದ, 30 ಸಾವಿರ ಕೊಂಡೂ ಹೋದ! ವ್ಯಾಪಾರಿಗೆ ಖಾತೆಗೆ ಕನ್ನ ಹಾಕಿದವ ಏನಾದ ಗೊತ್ತಾ? title=
panipuri

Panipuri fraud Case: ಚಾಮರಾಜನಗರ: ಉಂಡು ಹೋದ ಕೊಂಡು ಹೋದ ಎಂಬಂತೆ ಯುವಕನೋರ್ವ ಪಾನಿಪೂರಿ ತಿಂದಿದ್ದೂ ಅಲ್ಲದೇ ವ್ಯಾಪಾರಿಗೆ ಖಾತೆಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದಾನೆ. ಆದರೆ ಆತನ ಗ್ರಹಚಾರ ಕೆಟ್ಟಿದ್ದು, ಇದೀಗ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಯುವಕ.‌ ಸ್ನೇಹಿತರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಈತ ತನ್ನ ಬುದ್ಧಿವಂತಿಕೆ ತೋರಿ ವಂಚಿಸಿ ಕೊನೆಗೆ ಜೈಲುಪಾಲಾಗಿದ್ದಾನೆ. ಅಪರಿಚಿತರಿಗೆ ಫೋನ್ ಕೊಡುವ ಮುನ್ನ ಹಾಗೂ ಅವರಿವರ ಮುಂದೆ ಪಾಸ್ ವರ್ಡ್ ಒತ್ತುವ ಮುನ್ನ ಎಚ್ಚರಿಕೆ ಎಷ್ಟು ಅವಶ್ಯಕ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಇದನ್ನೂ ಓದಿ: ಏಷ್ಯಾದ ಅತಿದೊಡ್ಡಏರೋ ಇಂಡಿಯಾ ಶೋ ಕರುನಾಡಲ್ಲಿ...!

ಗೆಳೆಯರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಆರೋಪಿ ಯುವಕ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿನ‌ ಲೋಕೇಶ್ ಎಂಬವರ ಪಾನಿಪೂರಿ ಅಂಗಡಿಗೆ ತೆರಳಿ ಸ್ನೇಹಿತರ ಜೊತೆ ಮೂರು ಪ್ಲೇಟ್ ಪಾನಿಪೂರಿ ತಿಂದಿದ್ದಾನೆ‌. ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿ ವ್ಯಾಪಾರಿ ಫೋನ್ ಪಡೆದು ಬೇರೊಬ್ಬನಿಗೆ ಕರೆ ಮಾಡಿದ್ದಾನೆ. ಆತ ದುಡ್ಡು  ಕಳುಹಿಸಿದ್ದು ಒಮ್ಮೆ ಚೆಕ್ ಮಾಡಿ ಎಂದು ಹೇಳಿ ವ್ಯಾಪಾರಿ ಫೋನ್ ಪೇ ತೆರೆಯುವಾಗ ಪಾಸ್ ವರ್ಡ್ ನೋಡಿಕೊಂಡಿದ್ದಾನೆ.

ಸ್ವಲ್ಪ ಸಮಯದ ಬಳಿಕ ನಿಮ್ಮ ಫೋನ್ ನಲ್ಲಿ ಸರ್ವರ್ ಸಮಸ್ಯೆ ಇದೆ, ಪರಿಶೀಲಿಸುವುದಾಗಿ ಫೋನ್ ಪಡೆದು 30 ಸಾವಿರ ರೂ.ವನ್ನು ತನ್ನ ಖಾತೆಗೆ ಕಳುಹಿಸಿಕೊಂಡು ಪಾನಿಪೂರಿ ಹಣ 120 ರೂ. ಕಳುಹಿಸಿ ಟೋಪಿ ಹಾಕಿದ್ದ. ಘಟನೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಗಾಬರಿಗೊಂಡ ವ್ಯಾಪಾರಿ ಫೆ. 11 ರಂದು ಪ್ರಕರಣ ದಾಖಲಿಸಿದ್ದಾರೆ. ಈ ಬಳಿಕ ಚಾಮರಾಜನಗರ ಸಿಇಎನ್ ಠಾಣೆಯ ಪಿಐ ಆನಂದ್ ಮತ್ತು ತಂಡ ಕಾರ್ಯಾಚರಣೆ ಕೈಗೊಂಡು ಖದೀಮನಿಂದ 30 ಸಾವಿರ ರೂ. ಕಕ್ಕಿಸಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

ಬ್ಲಾಕ್ ಮೇಲ್‌ ಮಾಡುತ್ತಿದ್ದ ಯುವಕನ ಬಂಧನ:

ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಬ್ಲಾಕ್‌ ಮೇಲ್ ಮಾಡುತ್ತಿದ್ದ ಯುವಕನನ್ನು ಚಾಮರಾಜನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ಅಜಿತ್ ಬಂಧಿತ ಆರೋಪಿ. ಜಿಲ್ಲೆಯ ಮಹಿಳೆಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಈತ ಆಕೆಯೊಟ್ಟಿಗೆ ಸಲುಗೆ ಬೆಳೆಸಿಕೊಂಡು ಆಪ್ತವಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವ ಜೊತೆಗೆ ಬೆದರಿಕೆ ಒಡ್ಡುತ್ತಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ

ಈ ಸಂಬಂಧ ನೊಂದ ಮಹಿಳೆ ಚಾಮರಾಜನಗರ ಸಿಒಎನ್ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಪಿಐ ಆನಂದ್ ಹಾಗೂ ತಂಡ‌ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News