ಬೆಂಗಳೂರು: ನಮ್ಮೆಲ್ಲರ ಪ್ರೀತಿಯ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿಯನ್ನು ಕನ್ನಡ ನಾಡಿನ ಜನಗಳಿಗೆ ಹಾಗೂ ಚಿತ್ರಪ್ರೇಮಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅಂತಹ ಅಗಲಿದ ಪ್ರೀತಿಯ ಚೇತನಕ್ಕೆ ಸಂತಾಪ ಸೂಚಿಸುತ್ತಾ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈಗ ತಮ್ಮ ಫೇಸ್ ಬುಕ್ ಪುಟದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
"ನಮ್ಮ ನಡುವೆ ಇದ್ದ ಅಪರೂಪದ ವ್ಯಕ್ತಿತ್ವಗಳು ಅನಿರೀಕ್ಷಿತವಾಗಿ ಅಗಲಿದಾಗ ನಮಗಾಗುವ ನೋವಿನೊಂದಿಗೆ ಅವರೊಂದಿಗಿನ ಒಡನಾಟದ ನೆನಪುಗಳೂ ನಮ್ಮನ್ನು ಕಾಡಲು ಶುರು ಮಾಡುತ್ತವೆ, ನಾವಿಂದು ಅದ್ಭುತ ನಟನಷ್ಟೇ ಅಲ್ಲದೆ ಸ್ನೇಹಜೀವಿ ಹಾಗೂ ಮಾನವೀಯ ಮೌಲ್ಯಗಳುಳ್ಳ ಅಪರೂಪದ ವ್ಯಕ್ತಿತ್ವದ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ.
ಅವರೊಂದಿಗೆ ಒಡನಾಡಿದ್ದ ಹಲವರಲ್ಲಿ ಖಂಡಿತಾ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಎಲ್ಲರಂತೆ ನನ್ನಲ್ಲೂ ಅಂತಹ ಹಲವು ನೆನಪುಗಳಿವೆ. ಆ ನೆನಪುಗಳನ್ನು ಪದಗಳ ರೂಪದಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ಶ್ರದ್ಧಾಂಜಲಿ ಸಲ್ಲಿಸುವುದಷ್ಟೇ ನಮ್ಮ ಪಾಲಿಗೆ ಈಗ ಉಳಿದಿರುವುದು.
ಒಬ್ಬ ವ್ಯಕ್ತಿ ಕಾಲವಾದಗಲೇ ಅವರ ಗುಣಗಳನ್ನು ಹೇಳುವುದು ಸಹಜವಾದುದು, ಅಂತೆಯೇ ನಾ ಕಂಡಂತೆ ಪುನೀತ್ ಅವರ ಅದ್ಬುತ ವ್ಯಕ್ತಿತ್ವವನ್ನು ನಿಮ್ಮೆಲ್ಲರೆದುರು ಪ್ರಸ್ತುತಪಡಿಸಿದರೆ ಒಂದಷ್ಟು ಸಮಾಧಾನ ಸಿಗಲಿದೆ ಎಂಬ ಸ್ವಾರ್ಥ ನನ್ನದು.
ನನಗಿನ್ನೂ ಸ್ಪಷ್ಟವಾಗಿ ನೆನಪಿದೆ. ಅಂದಿನ ಸಂಜೆ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಾರನ್ನು ನಿಲ್ಲಿಸಿ, ನೂತನ ಸಚಿವನಾಗಿ ಆಯ್ಕೆಯಾಗಿದ್ದ ನನಗೆ ಅಭಿನಂದನೆ ಸಲ್ಲಿಸಿದ್ದರು. ನಾನು ರಸ್ತೆಯಲ್ಲಿ ಹೋಗುತ್ತಿರುವಾಗ ಅದು ಅವರದೇ ಕಾರು ಎಂದು ತಿಳಿದಿರಲಿಲ್ಲ. ಅವರು ಒಮ್ಮೆ ಕೈ ಬೀಸಿ ಮುಂದೆ ಹೋಗಬಹುದಿತ್ತು. ಆದರೆ, ತಮ್ಮ ಕಾರನ್ನು ನಿಲ್ಲಿಸಿ, ನನ್ನ ಬಳಿ ಬಂದು, ಸಚಿವನಾಗಿದ್ದಕ್ಕೆ ಅಭಿನಂದಿಸಿ, ಯುವಕರು ರಾಜಕೀಯದಲ್ಲಿ ತೊಡಗಿಕೊಳ್ಳುವುದು ಎಷ್ಟು ಮುಖ್ಯ ಎಂಬ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿದ್ದರು. ಅವರ ಈ ಸೌಜನ್ಯದ ನಡುವಳಿಕೆ ಕಂಡು ಅವರ ತಂದೆಯ ಗುಣಗಳು ನೆನಪಿಗೆ ಬಂದವು.
ಹಲವಾರು ತಿಂಗಳ ನಂತರ, ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯತಂತ್ರದ ಕುರಿತು ಸಭೆ ನಡೆಸುತ್ತಿದ್ದಾಗ, ರಾಜ್ಯದ ಪ್ರವಾಸಿ ಸ್ಥಳಗಳ ಬಗ್ಗೆ ನಮ್ಮ ರಾಜ್ಯ ಹಾಗೂ ನೆರೆಯ ರಾಜ್ಯಗಳಲ್ಲಿ ಪ್ರಭಾವ ಬೀರಲು ಕರ್ನಾಟಕ ಪ್ರವಾಸೋದ್ಯಮಕ್ಕೆ ಒಬ್ಬರು ಬ್ರಾಂಡ್ ಅಂಬಾಸಿಡರ್ ನೇಮಕ ಮಾಡುವ ಬಗ್ಗೆ ಚರ್ಚೆಗೆ ಬಂದಿತು. ನಮ್ಮ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಆಕರ್ಷಿಸಲು ಜನಪ್ರಿಯ ಹಾಗೂ ಪ್ರಭಾವ ಬೀರಬಲ್ಲ ವ್ಯಕ್ತಿಯ ಅಗತ್ಯವಿತ್ತು.
ನಮ್ಮ ರಾಜ್ಯದಲ್ಲಿ ಅನೇಕ ಪ್ರಾಕೃತಿಕ ಹಾಗೂ ಪಾರಂಪರಿಕ ಪ್ರವಾಸಿ ತಾಣಗಳಿದ್ದು, ಇವುಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಯಾವುದೇ ರೀತಿಯ ಮದ್ಯಪಾನ, ಧೂಮಪಾನ ಹಾಗೂ ಗುಟ್ಕಾದಂತಹ ಉತ್ಪನ್ನಗಳನ್ನು ಪ್ರೇರಿಪಿಸುವಂತಹ ಜಾಹಿರಾತುಗಳಲ್ಲಿ ಅಭಿನಯಿಸದೆ ಇರುವಂತಹ ಹಾಗೂ ಯುವಜನರು ಸೆರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಆದರ್ಶದ ವ್ಯಕ್ತಿತ್ವವುಳ್ಳ ಉತ್ತಮ ವ್ಯಕ್ತಿಯೊಬ್ಬರು ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗಬೇಕೆನ್ನುವುದು ನನ್ನ ಹಾಗೂ ಅಧಿಕಾರಿಗಳೆಲ್ಲರ ಆಸೆಯಾಗಿತ್ತು. ಅದರಂತೆ ಇದಕ್ಕೆ ಸೂಕ್ತ ವ್ಯಕ್ತಿಯಾಗಿದ್ದ ಪುನೀತ್ ರಾಜ್‌ಕುಮಾರ್ ಅವರು ಒಪ್ಪಿಕೊಂಡರೆ, ಅವರನ್ನೇ ರಾಯಭಾರಿಯನ್ನಾಗಿಸಬೇಕೆಂದು ಸಭೆಯಲ್ಲಿದ್ದ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದೆವು. ಅದಾಗಲೇ ಅವರು ಕೆಎಂಎಫ್ ಉತ್ಪನ್ನಗಳು ಮತ್ತು ಇತರೆ ಕೆಲವು ಸರ್ಕಾರಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು.
ನಾನು ಅವರ ಕಚೇರಿಗೆ ಕರೆ ಮಾಡಿ, ಅವರನ್ನು ಭೇಟಿಯಾಗಲು ಸಮಯ ಕೇಳಿದೆ. ಅವರು ತಕ್ಷಣವೇ ನನಗೆ ಕರೆ ಮಾಡಿ, " ನಾನು ನಿಮ್ಮನ್ನು ಬಹಳ ದಿನದಿಂದ ಬಲ್ಲೆ ಮತ್ತು ನೀವು ನನ್ನ ಕಚೇರಿಗೆ ಕರೆ ಮಾಡುವ ಬದಲು ನೇರವಾಗಿ ನನಗೆ ಒಂದು ಕರೆ ಅಥವಾ ಮೆಸೇಜ್ ಮಾಡಬಹುದಿತ್ತಲ್ಲ? ಅದಕ್ಕೇಕೆ ಸಂಕೋಚ" ಎಂದು ತಿಳಿಸಿದರು. ನಂತರ ನಾವಿಬ್ಬರೂ ಭೇಟಿಯಾಗುವ ಸಮಯ ಒದಗಿ ಬಂತು.
ಪ್ರವಾಸೋದ್ಯಮದಲ್ಲಿ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸುವ ನನ್ನ ಯೋಚನೆಯನ್ನು ಅವರೊಂದಿಗೆ ಹಂಚಿಕೊಂಡ ಕೂಡಲೇ, ಅವರು ಬಹಳ ಉತ್ಸುಕತೆಯಿಂದ ನನ್ನೊಡನೆ ಮಾತನಾಡಲು ಶುರು ಮಾಡಿದರು. ಅವರ ಉತ್ಸುಕತೆ ಹೇಗಿತ್ತೆಂದರೆ ಆ ಕ್ಷಣದಲ್ಲಿ ಅವರು ನನಗೆ ಕುತೂಹಲಭರಿತ ಮುಗ್ದ ಮಗುವಿನಂತೆ ಕಂಡುಬಂದರು.
ಅಲ್ಲದೆ ಚಿತ್ರೀಕರಣದ ಸಮಯದಲ್ಲಿ ನಮ್ಮ ರಾಜ್ಯದ ಇತಿಹಾಸ, ಸಂಸ್ಕೃತಿ ಹಾಗೂ ವಿಭಿನ್ನ ಅಡುಗೆ, ವಿಧಾನಗಳ ಕುರಿತು ತಾವು ಹೆಚ್ಚು ಅರಿಯಲು ಪ್ರಯತ್ನಿಸುವುದಾಗಿ ಹಾಗೂ ರಾಜ್ಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಬಯಸುವುದಾಗಿ ಹೇಳಿದ್ದರು. ಅಲ್ಲದೇ, ಚರ್ಚೆಯ ನಡುವೆ ನಮ್ಮ ಕನ್ನಡ ಭಾಷೆಯ ವೈವಿಧ್ಯತೆ ಹಾಗೂ ಈ ವಿಭಿನ್ನತೆಯಲ್ಲೂ ಕನ್ನಡವು ನಮ್ಮೆಲ್ಲರನ್ನೂ ಕನ್ನಡಿಗರೆಂದು ಹೇಗೆ ಒಗ್ಗೂಡಿಸಿದೆ ಎಂಬುದರ ಕುರಿತಾಗಿ ಮಾತನಾಡಿದ್ದರು. ಬಹಳ ಹೊತ್ತು ಪ್ರವಾಸೋದ್ಯಮ, ರಾಜ್ಯ, ಭಾಷೆಯ ಕುರಿತು ಚರ್ಚೆ ನಡೆಸಿದ ನಂತರ, ನಾವು ಬಂದ ವಿಷಯವನ್ನು ಅವರ ಮುಂದೆ ಪ್ರಸ್ತಾಪಿಸುವ ಸಮಯ ಬಂದಿತು. ಆ ಸಂದರ್ಭದಲ್ಲಿ ಫೀಸ್ ಗೆ ಸಂಬಂಧಿಸಿದಂತೆ ಹಣ ಕಾಸು ವಿಷಯವನ್ನು ಹೇಗೆ ಪ್ರಸ್ತಾಪಿಸುವುದು, ಒಪ್ಪಿಕೊಳ್ಳುವರೊ ಇಲ್ಲವೋ ಎಂಬ ಗೊಂದಲದಲ್ಲಿರುವಾಗ ಅವರೇ ನಮ್ಮ ಉದ್ದೇಶವನ್ನು ಅರಿತುಕೊಂಡು,
"ಪ್ರಿಯಾಂಕ್, ನನ್ನ ರಾಜ್ಯದ ಪ್ರಚಾರಕ್ಕೆ ನಾನು ಸೂಕ್ತ ಎಂದು ನೀವೆಲ್ಲರೂ ಭಾವಿಸಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ರಾಜ್ಯ ಮತ್ತು ಇಲ್ಲಿನ ಜನರು ನನ್ನ ಕುಟುಂಬ ಮತ್ತು ನನಗೆ ಎಲ್ಲವನ್ನೂ ನೀಡಿದ್ದಾರೆ. ಇಂದು ನನ್ನಲ್ಲಿರುವ ಎಲ್ಲವನ್ನೂ ನೀಡಿದ್ದು ಅವರೇ. ಇಂದು ನನ್ನ ಕುಟುಂಬದ ಮೇಲೆ ಈ ನಾಡಿನ ಜನರು ಇಟ್ಟಿರುವ ಗೌರವ, ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಸದಾ ಋಣಿಯಾಗಿದ್ದೇನೆ.
ಆದ್ದರಿಂದ ನಾನು ಫೀಸ್ ಕುರಿತು ಚರ್ಚಿಸಲಾರೆ. ಇದು ನನ್ನ ಆತ್ಮಕ್ಕೆ ಮಾತ್ರವಲ್ಲದೆ ನನ್ನನ್ನು ನಂಬಿರುವ ನನ್ನ ಎಲ್ಲಾ ಜನರಿಗೆ ಮೋಸ ಮಾಡಿದಂತಾಗುತ್ತದೆ. ಅಲ್ಲದೇ, ನಾವಿಬ್ಬರೂ ಈ ವಿಚಾರವಾಗಿ ಪರಸ್ಪರ ಮುಜುಗರಕ್ಕೊಳಗಾಗಬಾರದು. ಆದ್ದರಿಂದ, ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನಮ್ಮ ರಾಜ್ಯದ ಪ್ರವಾಸೋದ್ಯಮದ ಪ್ರಚಾರಕ್ಕೆ ನಾನು ಯಾವುದೇ ಹಣ ಸ್ವೀಕರಿಸುವುದಿಲ್ಲ. ನಾನೇ ನನ್ನಲ್ಲಿರುವ ಕೆಲವು ವಿಶೇಷ ಆಲೋಚನೆಗಳೊಂದಿಗೆ ಕೆಲವೇ ದಿನಗಳಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಆದಷ್ಟು ಶೀಘ್ರವಾಗಿ ಕೆಲಸ ಪ್ರಾರಂಭಿಸೋಣ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆಯ ಜೊತೆ ನಾನೂ ಕೈಜೋಡಿಸುತ್ತೇನೆ. ಬೇಕಾದರೆ ತಮ್ಮದೇ ಸ್ವಂತ ಕ್ಯಾಮೆರಾ, ಡ್ರೋಣ್ ಹಾಗೂ ತಾವು ತೆಗೆದ ಸಾವಿರಾರು ಚಿತ್ರಗಳನ್ನೂ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬಳಸಿಕೊಳ್ಳಿ" ಎಂದೂ ತಿಳಿಸಿದರು.
ಆಗಲೇ ನನಗೆ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಪುನೀತ್ ಅವರ ಹೃದಯದಲ್ಲಿದ್ದ ಅಭಿಮಾನ ಎಂತದ್ದು ಎಂದು ತಿಳಿಯಿತು.
ಕೊನೆಗೆ ಯೋಜನೆಯ ಕುರಿತು ಕೂಲಂಕಷವಾಗಿ ಚರ್ಚಿಸಲಾಯಿತು. ಅಷ್ಟರಲ್ಲಾಗಲೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ, ನಾವು ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ಆದರೆ, ಚುನಾವಣೆ ನಂತರ ಈ ಯೋಜನೆಯನ್ನು ಪ್ರಾರಂಭಿಸಲು ಅವರು ಉತ್ಸುಕರಾಗಿದ್ದರು, ಅಲ್ಲದೇ ಅವರೇ ಈ ಕುರಿತು ಪ್ರಸ್ತಾಪಿಸಿದ್ದರು. ದುರದೃಷ್ಟವಶಾತ್ ಚುನಾವಣೆ ಮುಗಿದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನನ್ನ ಖಾತೆ ಬದಲಾವಣೆಯಾಗಿತ್ತು.
ಅವರೊಡನೆ ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಯನ್ನು ಪ್ರಾರಂಭಿಸಲು ಸಾದ್ಯವಾಗದೆ ಇರುವುದಕ್ಕೆ ಇಂದು ನನ್ನನ್ನು ನಾನೇ ದೂಷಿಸಿಕೊಳ್ಳುತ್ತೇನೆ. ಅದು ರಾಜ್ಯದ ಪ್ರವಾಸೋದ್ಯಮಕ್ಕೆ ಎಷ್ಟು ಸಹಾಯವಾಗುತ್ತಿತ್ತು ಎಂಬುದು ಬೇರೆ ವಿಷಯ, ಆದರೆ, ಸೂಪರ್ ಸ್ಟಾರ್ ಆಗಿದ್ದರೂ ಕನ್ನಡ ಮತ್ತು ಕರ್ನಾಟಕವನ್ನು ತನ್ನ ಹೃದಯದಲ್ಲೇ ಆರಾಧಿಸುವ ಸಹೃದಯಿ ಹಾಗೂ ಸಜ್ಜನ ವ್ಯಕ್ತಿಯೊಡನೆ ಕೆಲಸ ಮಾಡಲು ನನಗೆ ಸಾಧ್ಯವಾಗದ ಕುರಿತು ಇಂದು ವಿಷಾದವಾಗುತ್ತಿದೆ.
ನಾವಿಂದು ಕೇವಲ ಪ್ರತಿಭಾನ್ವಿತ ನಟನನ್ನು ಮಾತ್ರವಲ್ಲ, ಒಬ್ಬ ಸಹೃದಯಿ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದ ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಕರ್ನಾಟಕಕ್ಕೆ ಶೂನ್ಯ ಆವರಿಸಿದೆ. ಅಂತೆಯೇ ನನ್ನಲ್ಲೂ ನಿಷ್ಕಲ್ಮಶ ಮನಸ್ಸಿನ ಗೆಳೆಯನನ್ನು ಕಳೆದುಕೊಂಡ ನೋವು ಆವರಿಸಿದೆ."
- ಪ್ರಿಯಾಂಕ್ ಖರ್ಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ