"ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ"

ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವರು ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Written by - Zee Kannada News Desk | Last Updated : Jan 19, 2023, 05:49 PM IST
  • ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ.
  • ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ
  • ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
"ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ" title=
file photo

ಬೆಂಗಳೂರು: ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವರು ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ ಜಯಗಳಿಸಿದ್ದರಿಂದ ನಮ್ಮ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಕರೆದು, ನೀವು ಸದನದಲ್ಲಿ ಬಹುಮತ ಸಾಬೀತು ಮಾಡಬೇಕು ಎಂದಿದದ್ರು. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಕೇವಲ ಮೂರು ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಯಿತು. ನಂತರ ಜೆಡಿಎಸ್‌ ಜೊತೆಸೇರಿ ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು. ನಾವು 80 ಶಾಸಕರು ಇದ್ದರೂ ಕೂಡ 37 ಶಾಸಕರಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ, ಅಸಹಿಷ್ಣುತೆ, ಸೇಡಿನ ರಾಜಕಾರಣ ಆರಂಭವಾಗುತ್ತದೆ ಎಂಬುದು ನಮ್ಮ ಆತಂಕವಾಗಿತ್ತು. ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಕೆರಳಿಸಿ, ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. 

ಇದನ್ನೂ ಓದಿ: ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!

2 ವರ್ಷ 2 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಅನೈತಿಕ ರಾಜಕಾರಣದಿಂದ ಅಧಿಕಾರ ಕಳೆದುಕೊಂಡರು. ನಮ್ಮ ಪಕ್ಷದ 14 ಶಾಸಕರು ತಮ್ಮನ್ನು ತಾವು ಮಾರಿಕೊಂಡು, ಜನರ ಅಭಿಪ್ರಾಯಕ್ಕೆ ಬೆಲೆ ಕೊಡದೆ ಬಿಜೆಪಿ ಸೇರಿದರು. ಈ ಆಪರೇಷನ್‌ ಕಮಲಕ್ಕೆ ಸುಮಾರು 1,000 ಕೋಟಿ ಹಣ ಖರ್ಚಾಗಿರಬಹುದು. ಇದು ರಾಜಕೀಯ ವ್ಯಭಿಚಾರ ಎಂದು ನಾನು ಅಂದೇ ಹೇಳಿದ್ದೆ. ಹೀಗೆ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಆದರೆ ಜನರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದೆ. ಆಪರೇಷನ್‌ ಕಮಲಕ್ಕೆ ಶಾಸಕರಿಗೆ 30 ರಿಂದ 35 ಕೋಟಿ ಹಣ ಕೊಟ್ಟಿದ್ದು ಯಡಿಯೂರಪ್ಪ ಅವರದ್ದು. ಯಡಿಯೂರಪ್ಪ ಅವರ ಮನೆಯಲ್ಲೇ ಯಾರಿಗೆ ಗುತ್ತಿಗೆ ಕೆಲಸ ಕೊಡಬೇಕು, ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಇದನ್ನು ಹೇಳಿದ್ದು ಬಿಜೆಪಿಯ ಬಸನಗೌಡ‌ ಪಾಟೀಲ್ ಯತ್ನಾಳ್. ಯತ್ನಾಳ್‌ ಅವರು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು 3000 ಕೋಟಿ ಮತ್ತು ಸಚಿವರಾಗಲು 100 ಕೋಟಿ ಹಣ ಕೊಡಬೇಕು ಎಂದರು. ಇದೆಲ್ಲ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ವ?

ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ. ಯಾಕೆಂದರೆ ರಾಜ್ಯದ ಬಿಜೆಪಿ ಜನರಿಗೆ ಹಳಸಲಾಗಿದೆ. ನಮ್ಮದು ಭ್ರಷ್ಟ ಸರ್ಕಾರ ಆದರೂ ಕೂಡ ಮೋದಿ ಅವರನ್ನು ನೋಡಿ ಜನ ನಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ. “ ನ ಖಾವೂಂಗ, ನ ಖಾನೆದೂಂಗ” ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದೀರಿ ಮೋದಿಜೀ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್‌ ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಅವರು ಹೇಳಿದ್ದರು. ಬೇರೆಯವರ ಧಮ್‌, ತಾಕತ್‌ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ. 

ಕಳೆದ ಹಾನಗಲ್ ಉಪಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ 15 ದಿನ ಹಾನಗಲ್‌ ನಲ್ಲಿ ಟಿಕಾಣಿ ಹೂಡಿದ್ದರು. ಮಾವನ ಮನೆಯಲ್ಲಿ ಉಳಿದುಕೊಂಡು ಹೇಗಾದರೂ ಮಾಡಿ ಶ್ರೀನಿವಾಸ್‌ ಮಾನೆ ಅವರನ್ನು ಸೋಲಿಸಬೇಕು ಎಂದು ಕೆಲಸ ಮಾಡಿದ್ರು ಆದರೂ ಜನರು ನಮ್ಮ ಮಾತಿಗೆ ಬೆಲೆ ಕೊಟ್ಟು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ನಮ್ಮ ಮಾನೆ ಅವರನ್ನು ಗೆಲ್ಲಿಸಿದ್ರು. ಪಕ್ಕದ ಕ್ಷೇತ್ರದಲ್ಲೇ ಸೋತರೂ ಬೊಮ್ಮಾಯಿಗೆ ಇನ್ನು ಬುದ್ದಿ ಬಂದಿಲ್ಲ. ಭ್ರಷ್ಟಾಚಾರದಲ್ಲೇ ಇನ್ನೂ ಮುಳುಗಿ ಕೂತಿದ್ದಾರೆ. ದುರಂತ ಎಂದರೆ ಶಿಕ್ಷಣ ಕ್ಷೇತ್ರದ ಉಪ ಕುಲಪತಿಗಳಿಗೆ 10 ಕೋಟಿ ಲಂಚ ನಿಗದಿ ಮಾಡಿದ್ದಾರೆ. 

ಇದನ್ನೂ ಓದಿ: Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ

ಪ್ರೀತಿ, ಸ್ನೇಹ, ಸಹೋದರತ್ವ ಇರಬೇಕಾದ ಜನ ಮನಸಿನಲ್ಲಿ ದ್ವೇಷ, ವೈರತ್ವ ತುಂಬಿದ್ದಾರೆ. ಒಡೆದಿರುವ ಸಮಾಜವನ್ನು ಒಂದು ಮಾಡಲು ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ತಿಂಗಳ 30 ರಂದು ಈ ಯಾತ್ರೆ ಕೊನೆಯಾಗಲಿದೆ, ನಾವು ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿದ್ದೇವೆ. ರಾಹುಲ್‌ ಗಾಂಧಿ ಅವರು ಇಂದು ಜನರ ಮನಸಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಬಡಜನರ, ಅಲ್ಪಸಂಖ್ಯಾತರ, ಮಹಿಳೆಯರ, ಮಕ್ಕಳ, ಕಾರ್ಮಿಕರ, ರೈತರ ವಿರೋಧಿ ಸರ್ಕಾರ ಇದೆ. ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ.ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ. 

ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನ ಬದುಕುವು ಕಷ್ಟವಾಗಿದೆ. ಗ್ಯಾಸ್‌ ಹಾಗೂ ದಿನಸಿ ಕೊಳ್ಳಲು ಬಡವರಿಗೆ ಕಷ್ಟವಾಗುತ್ತದೆ ಎಂದು ನಾವು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದೇವೆ, ನಾವು ನುಡಿದಂತೆ ನಡೆಯುವವರು. ಬಡವ ಬಲ್ಲಿದನೆನ್ನದೆ ಪ್ರತೀ ಮನೆಗೆ 200 ಯುನಿಟ್‌ ವಿದ್ಯುತ್‌ ನೀಡುವ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ನಿಮಗೆ ಬೇಕು ಎನ್ನುವುದಾದರೆ ಜನಪರವಾದ ಕಾಂಗ್ರೆಸ್‌ ಪಕ್ಷಕ್ಕೆ ತಾವೆಲ್ಲ ಬೆಂಬಲ ನೀಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ. 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ರೈತರು ಗೊಬ್ಬರ, ಬೀಜ, ಔಷಧಿ ಕೇಳಿದ್ದಕ್ಕೆ ಗೋಲಿಬಾರ್‌ ಮಾಡಿಸಿ, ಅಮಾಯಕ ರೈತರನ್ನು ಕೊಂದರು. ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಲಂಬಾಣಿ ತಾಂಡಗಳು, ಗೊಲ್ಲರ ಹಟ್ಟಿಗಳು ಹೀಗೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅವರಿಗೆ ಭೂಒಡೆತನ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಓಟಿನಾಸೆಗೆ ಇದನ್ನು ತಾವು ಮಾಡಿದ್ದು ಎನ್ನುತ್ತಿದ್ದಾರೆ. ಲಂಬಾಣಿ ಜನರ ಆರಾಧ್ಯ ವ್ಯಕ್ತಿ ಸಂತ ಸೇವಾಲಾಲ್‌ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆರಂಬಿಸಿದವರು ನಾವು. ಸೇವಾಲಾಲ್‌ ಹುಟ್ಟಿದ ಜಾಗವನ್ನು ಅಭಿವೃದ್ಧಿ ಮಾಡಲು 130 ಕೋಟಿ ರೂ. ಹಣ ನೀಡಿದ್ದು ನಮ್ಮ ಸರ್ಕಾರ. 

ಸಂತೋಷ್‌ ಪಾಟೀಲ್‌ ಅವರ ಸಾವಿಗೆ ಕಾರಣರಾದ ಈಶ್ವರಪ್ಪ ಅವರಿಗೆ ಮೂರೇ ತಿಂಗಳಲ್ಲಿ ಪೊಲೀಸರ ಮೂಲಕ ಬಿ ರಿಪೋರ್ಟ್‌ ಹಾಕಿಸಿದ್ರು. ಹೀಗೆ ಹಲವು ಜನ ಸರ್ಕಾರದ ಲಂಚಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಈ ಸರ್ಕಾರ ಗುತ್ತಿಗೆದಾರರಿಗೆ ಕೊಡಬೇಕಾದ 25,000 ಕೋಟಿ ಹಣವನ್ನು ಬಾಕಿ ಇಟ್ಟುಕೊಂಡಿದೆ ಎಂಬ ಕಾರಣಕ್ಕೆ ನಿನ್ನೆ ಗುತ್ತಿಗೆದಾರರ ಸಂಘದವರು ಪ್ರತಿಭಟನೆ ಮಾಡಿದ್ರು. ಈ ಸರ್ಕಾರದಲ್ಲಿ ಬರೀ ಲಂಚ, ಲಂಚ, ಲಂಚ ಮಾತ್ರ ಇದೆ. ಇಂಥಾ ಭ್ರಷ್ಟ ಸರ್ಕಾರ ನಿಮಗೆ ಬೇಕಾ ಬೇಡ್ವಾ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News