ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಿಹಾರದ ವಿವಿಧೆಡೆ ಸಿಡಿಲು ಬಡಿದು ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ.
ಕೈಮೂರ್ ಜಿಲ್ಲೆಯಲ್ಲಿ ನಾಲ್ವರು, ಗಯಾದಲ್ಲಿ ನಾಲ್ವರು, ಕತಿಹಾರ್ನಲ್ಲಿ ಓರ್ವ, ಮೋತಿಹರಿಯಲ್ಲಿ ಮೂವರು, ಅರಾದಲ್ಲಿ ಓರ್ವ ಮತ್ತು ಜಹಾನಾಬಾದ್ ಮತ್ತು ಅರ್ವಾಲ್ನಲ್ಲಿ ತಲಾ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕೈಮೂರ್ನಲ್ಲಿ ಸಿಡಿಲು ಬಡಿದು ಮಹಿಳೆ ಮತ್ತು ಮಗು ಮೃತರಾಗಿದ್ದಾರೆ. ಗಯಾ ಜಿಲ್ಲೆಯಲ್ಲಿ, ತಂಕುಪ್ಪ ಬ್ಲಾಕ್ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಮಾಮ್ಗಂಜ್ ಬ್ಲಾಕ್ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಮೋತಿಹರಿಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದರೆ, ಅರಾದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಜಹಾನಾಬಾದ್ನಲ್ಲಿ, ಜಾಫರ್ಗಂಜ್ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ರತ್ನಿ ಬಣದ ಮೀರ್ಗಂಜ್ ಗ್ರಾಮದಿಂದ ಒಂದು ಸಾವು ವರದಿಯಾಗಿದೆ.
ಏತನ್ಮಧ್ಯೆ, ನಿರಂತರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಬಿಹಾರದ ಹಲವೆಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಟ್ನಾದಲ್ಲಿ, ಗಂಗಾ ಘಾಟ್ನಲ್ಲಿ ಗಂಗಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟ ತಲುಪಿದೆ.
ಕೇಂದ್ರ ಜಲ ಆಯೋಗ(ಸಿಡಬ್ಲ್ಯುಸಿ)ವು ಬುಧವಾರ ಬಿಹಾರದ ಎಲ್ಲಾ ಜಿಲ್ಲೆಗಳಿಗೆ ಗಂಗಾ ಮಾರ್ಗದಲ್ಲಿ ಬಕ್ಸಾರ್ನಿಂದ ಭಾಗಲ್ಪುರದವರೆಗೆ ಪ್ರವಾಹ ಎಚ್ಚರಿಕೆ ನೀಡಿದ್ದು, ನದಿ ಪಾತ್ರದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.