Patholes Of Bangalore: ಬೆಂಗಳೂರಿನ ತುಂಬಾ ಬಲಿಗಾಗಿ ಕಾದಿವೆ ರಸ್ತೆ ಗುಂಡಿಗಳು..!

 Patholes Of Bangalore - ಅದೆಷ್ಟು ಹೇಳಿದರೂ, ಕೇಳಿದರೂ ಬಿಬಿಎಂಪಿ (BBMP) ಅಧಿಕಾರಿಗಳು ಅಲರ್ಟ್ ಆಗ್ತಿಲ್ಲ. ರಸ್ತೆ ಗುಂಡಿಗಳನ್ನ ಮುಚ್ಚೋದಕ್ಕೂ ಮನಸ್ಸು ಮಾಡ್ತಾ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿ ಸವಾರರು ಜೀವ ಕೈಯಲ್ಲಿಡಿದು ಸವಾರಿ ಮಾಡಬೇಕಾಗಿದೆ.

Written by - Zee Kannada News Desk | Last Updated : Dec 13, 2021, 07:13 PM IST
  • ಸಿಲಿಕಾನ್ ಸಿಟಿ ರಸ್ತೆ ಗುಂಡಿಗಳಿಗೆ ಇನ್ನು ಮುಕ್ತಿ ಸಿಗುತ್ತಿಲ್ಲ.
  • ಕಾಟಾಚಾರಕ್ಕೆ ಗುಂಡಿಗಳಿಗೆ ಮಣ್ಣುತುಂಬಿದ ಅಧಿಕಾರಿಗಳು.
  • ಕೋರ್ಟ್, ಸರ್ಕಾರದ ಎಚ್ಚರಿಕೆಯ ಬಳಿಕವೂ ಕೂಡ ಯಾವುದೇ ಬದಲಾವಣೆ ಇಲ್ಲ.
Patholes Of Bangalore: ಬೆಂಗಳೂರಿನ ತುಂಬಾ ಬಲಿಗಾಗಿ ಕಾದಿವೆ ರಸ್ತೆ ಗುಂಡಿಗಳು..! title=
Patholes Of Bangalore (File Photo)

Patholes Of Bangalore - ಅದೆಷ್ಟು ಹೇಳಿದರೂ, ಕೇಳಿದರೂ ಬಿಬಿಎಂಪಿ (BBMP) ಅಧಿಕಾರಿಗಳು ಅಲರ್ಟ್ ಆಗ್ತಿಲ್ಲ. ರಸ್ತೆ ಗುಂಡಿಗಳನ್ನ ಮುಚ್ಚೋದಕ್ಕೂ ಮನಸ್ಸು ಮಾಡ್ತಾ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿ ಸವಾರರು ಜೀವ ಕೈಯಲ್ಲಿಡಿದು ಸವಾರಿ ಮಾಡಬೇಕಾಗಿದೆ.

ಕಾಟಾಚಾರಕ್ಕೆ ಒಂದಷ್ಟು ಗುಂಡಿಗಳಿಗೆ ಟಾರ್ ಹಾಕಿದ್ದರೂ, ಉಳಿದ ಕಡೆ ಒಂದಷ್ಟು ಮಣ್ಣು ತುಂಬಿದ್ದಾರೆ. ಸಿಲಿಕಾನ್ ಸಿಟಿ, ಐಟಿ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರಲ್ಲಿ (Bangalore) ರಸ್ತೆ ಗುಂಡಿಗಳಿಗೆ ಮುಕ್ತಿ ಸಿಗುತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) ವ್ಯಾಪ್ತಿಯಲ್ಲಿ ಸಾವಿರಾರು ಗುಂಡಿಗಳು ನಿತ್ಯ ವಾಹನ ಸವಾರರನ್ನ ಕಾಡುತ್ತಿವೆ. ಈಗಾಗಲೇ ಹಲವರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಸೆಪ್ಟೆಂಬರ್ 20ರ ಒಳಗಾಗಿ ಬೆಂಗಳೂರಿನ ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಬಿಬಿಎಂಪಿಗೆ ಸರ್ಕಾರ ಗಡುವು ನೀಡಿತ್ತು. ಆದರೆ ಪಾಲಿಕೆ ಗುರಿ ತಲುಪುವಲ್ಲಿ ಎಡವಿತ್ತು. ಈ ನಡುವೆ ಮತ್ತೆ ಡೆಡ್‌ಲೈನ್ ವಿಸ್ತರಣೆ ಮಾಡಿದ್ದರೂ ರಸ್ತೆ ಗುಂಡಿಗಳಿಂದ ಮುಕ್ತಿ ಸಿಗುತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆ (Smart City Project) ಅಡಿ 1,344 ಕಿಮೀ ವ್ಯಾಪ್ತಿಯಲ್ಲಿ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಕೆಲಸ ನಡೆಯುತ್ತಿದೆ. ಜಯಮಹಲ್, ಮರಿಗೌಡ, ರಿಚ್‌ಮಂಡ್, ಗೊರಗುಂಟೆಪಾಳ್ಯ, ರಾಜಕುಮಾರ್ ಸಮಾಧಿ ಎದುರಿನ ರಸ್ತೆಗಳು ಹಾಗೂ ಯಶವಂತಪುರದಿಂದ ಗೊರಗುಂಟೆ ಪಾಳ್ಯದವರೆಗಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸಾವಿರಾರು ಕೋಟಿ ಖರ್ಚು ಮಾಡಿದ್ರೂ ಸವಾರರಿಗೆ ಮಾತ್ರ ಗುಂಡಿಗಳಿಂದ ಮುಕ್ತಿ ಸಿಗುತ್ತಿಲ್ಲ. ಎದ್ದೂ, ಬಿದ್ದು ರಸ್ತೆಯಲ್ಲಿ ಸವಾರಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಗುಂಡಿ ಮುಚ್ಚಿದರೂ ಅವೈಜ್ಞಾನಿಕ..!
ಒಂದು ಕಡೆ ಬೆಂಗಳೂರಿನ ತುಂಬಾ ರಸ್ತೆ ಗುಂಡಿಗಳದ್ದೇ ಹಾವಳಿಯಾಗಿದ್ದರೆ, ಮತ್ತೊಂದು ಕಡೆ ಮುಚ್ಚಿರುವ ಗುಂಡಿಗಳು ಯಾವಾಗ ಮತ್ತೆ ಬಾಯಿ ಬಿಡುತ್ತವೋ ಅಂತಾ ವಾಹನ ಸವಾರರು ಹೆದರುವ ಪರಿಸ್ಥಿತಿ ಇದೆ. ಹಾಗೇ ಮುಚ್ಚಿದ ಗುಂಡಿಗಳು ಕೆಲವೆಡೆ ಹಂಪ್ ರೂಪ ಪಡೆದಿವೆ. ಹೇಗಪ್ಪಾ ಇಂತಹ ರಸ್ತೆಗಳಲ್ಲಿ ಸವಾರಿ ಮಾಡೋದು ಅಂತಾ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಸಂಬಂಧಪಟ್ಟವರು ಮಾತ್ರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿ ಹೊತ್ತಲ್ಲಿ ಗುಂಡಿಗಳಿಂದ ಬಚಾವ್ ಆಗೋದೆ ಒಂದು ಸವಾಲು.

ಗುಂಡಿ ತಪ್ಪಿಸಲು ಹೋಗಿ ಸಾವು
ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಿಗೆ ಗುಂಡಿಗಳೇ ದೊಡ್ಡ ಪಾಲು ನೀಡುತ್ತಿವೆ. ಅದರಲ್ಲೂ ರಸ್ತೆ ಗುಂಡಿಗಳನ್ನ ತಪ್ಪಿಸಲು ಹೋಗಿ ಜೀವ ಕಳೆದುಕೊಂಡವರೇ ಹೆಚ್ಚು. ಇತ್ತೀಚೆಗಷ್ಟೇ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ಮಹಿಳೆ ಮೃತಪಟ್ಟಿದ್ದರು. ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಮಹಿಳೆ ಪಕ್ಕಕ್ಕೆ ಸರಿದಾಗ ಟಿಪ್ಪರ್ ಮಹಿಳೆ ಮೇಲೆ ಹರಿದಿತ್ತು. ಇದೇ ರೀತಿ ಹಲವರು ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ರಾತ್ರಿ ವೇಳೆ ನರಕ ದರ್ಶನ
ಮೊದಲೇ ರಸ್ತೆ ತುಂಬಾ ಗುಂಡಿಗಳು, ಅದರಲ್ಲೂ ರಾತ್ರಿ ವೇಳೆ ಇಂತಹ ತೂತು ಬಿದ್ದ ರಸ್ತೆಗಳಲ್ಲಿ ವಾಹನ ಓಡಿಸೋದು ಸವಾಲಿನ ಕೆಲಸವೇ ಸರಿ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಗುಂಡಿಗಳಿಂದ ಅಪಾಯಕ್ಕೆ ಸಿಲುಕುತ್ತಿದ್ದು, ಹಲವರು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ಆದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ಗುಂಡಿಗಳಿಗೆ ಒಂದು ಗತಿ ಕಾಣಿಸಲು ಮುಂದಾಗ್ತಾ ಇಲ್ಲ. ಸರ್ಕಾರ ಡೆಡ್‌ಲೈನ್ ಕೊಟ್ಟರೂ ಕೆಲಸ ಮುಗಿಸದೆ ಅಧಿಕಾರಿಗಳು ಕೇವಲ ಸಬೂಬುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. 

ಇದನ್ನೂ ಓದಿ-Belagavi Winter Session: ಅಗಲಿದ ಗಣ್ಯರಿಗೆ ಸಂತಾಪ, ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು

ಮಳೆಯಿಂದ ಶುರುವಾಯ್ತು ಕಂಟಕ
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಹೀಗಾಗಿ ನಿರಂತರವಾಗಿ ಸುರಿದ ಮಳೆ ಬೆಂಗಳೂರಿನ ರಸ್ತೆಗಳನ್ನು ಮತ್ತಷ್ಟು ಹಾಳು ಮಾಡಿದೆ. ಮೊದಲೇ ಗುಂಡಿ ಬಿದ್ದ ರಸ್ತೆಗಳಲ್ಲಿ ಗುಂಡಿಗಳ ಗಾತ್ರ ಮತ್ತಷ್ಟು ಹೆಚ್ಚಾಗಿದೆ. ಇದು ಮತ್ತಷ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೆಲವು ರಸ್ತೆಗಳಲ್ಲಂತೂ ಗುಂಡಿಗಳು ಥೇಟ್ ಸ್ವಿಮ್ಮಿಂಗ್ ಪೂಲ್ ರೂಪ ಪಡೆದಿವೆ. ನೀರು ತುಂಬಿರುವ ಗುಂಡಿಗಳಿಗೆ ಬಿದ್ದು ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ. ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಲೇ ಸವಾರಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ-ಮಿಸ್ಟರ್ ಸಿದ್ದಸೂತ್ರದಾರ, ಮಿಸ್ಟರ್ ಟರ್ಮಿನೇಟರ್, ಮಿಸ್ಟರ್ ಸಿದ್ದಕಲಾನಿಪುಣಪ್ಪಾ!: ಸಿದ್ದರಾಮಯ್ಯಗೆ ಎಚ್​ಡಿಕೆ ಡಿಚ್ಚಿ

ರಸ್ತೆ ಗುಂಡಿ ಕಥೆ ಮುಂದೇನು..?
ಈಗಾಗಲೇ ಕೋರ್ಟ್ ಎಚ್ಚರಿಕೆ ನೀಡಿದ್ದಾಗಿದೆ, ಸರ್ಕಾರ ಕೂಡ ಬಿಬಿಎಂಪಿಗೆ ವಾರ್ನಿಂಗ್ ಕೊಟ್ಟಿದ್ದಾಗಿದೆ. ಆದರೆ ಯಾವುದೇ ಬದಲಾವಣೆ ಆಗಿಲ್ಲ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆಯೇ ವಿನಃ, ರಸ್ತೆ ಗುಂಡಿಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಒಂದು ಕಡೆ ಬಿಬಿಎಂಪಿ ರಸ್ತೆ ಗುಂಡಿಗಳನ್ನ ಮುಚ್ಚುತ್ತಾ ಬಂದರೆ, ಮತ್ತೊಂದು ಕಡೆ ರಸ್ತೆಗಳು ಬಾಯಿ ತೆರೆಯುತ್ತಿವೆ. ಕಳಪೆ ಕಾಮಗಾರಿ ಫಲವಾಗಿ ವಾಹನ ಸವಾರರು ರಸ್ತೆ ಗುಂಡಿಗೆ ಬಿದ್ದು ಕೈ-ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ರಸ್ತೆ ಗುಂಡಿಗಳಿಗೆ ಒಂದು ಗತಿ ಕಾಣಿಸಬೇಕಿದೆ.

ಇದನ್ನೂ ಓದಿ-ನಕಲಿ ‘ಕೊರೊನಾ’ ರಿಪೋರ್ಟ್ ಕೊಟ್ಟ ಆರೋಪ - ನಾಲ್ಕು ಜನರ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News