ನವದೆಹಲಿ: ಬಾಲಿವುಡ್ ಚಿತ್ರದ ನಟಿಗಳೆಂದರೆ ಕೇವಲ ಸೊಂಟ ಬಳಕಿಸುತ್ತಾ ಐಟಂ ಸಾಂಗ್ ಮಾಡುವ ಬೆಡಗಿಯರೆಂದು ಬಹುತೇಕರು ಭಾವಿಸಿರುತ್ತಾರೆ.ಆದರೆ ಈ ನಟಿ ಮಾತ್ರ ಇತ್ತ ಫಿಲಂ ಗೂ ಜೈ ಅತ್ತ ಸಾಮಾಜಿಕ ಕಳಕಳಿಗೂ ಜೈ ಅಂತಿದ್ದಾರೆ. ಹಂಗಾದ್ರೆ ಈ ನಟಿ ಯಾರಂತೀರಾ?
ಅವರು ಬೇರೆ ಯಾರು ಅಲ್ಲ ಅತ್ತ ಶ್ರೀಲಂಕಾದಿಂದ ಬಂದು ಈಗ ಬಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಹಾಟ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್. ಹೌದು ಈಗ ನಟಿ ಯಾರು ಮಾಡದೇ ಇರುವ ಒಂದು ಮಹತ್ವದ ಕಾರ್ಯವನ್ನು ಭಿನ್ನ ರೀತಿಯಲ್ಲಿ ಮಾಡ ಹೊರಟಿದ್ದಾರೆ.ಅಷ್ಟಕ್ಕೂ ಅವರು ಮಾಡಹೊರಟಿರುವ ಅಂತಹ ಕಾರ್ಯವಾದರೂ ಏನು ಅಂತೀರಾ?
ನಾವು ಭೂಮಿಯ ಮೇಲೆ ಎಲ್ಲ ರೀತಿಯ ಮಾನವ ಹಕ್ಕುಗಳ ವಿಚಾರವಾಗಿ ಬೀದಿಯಿಂದ ಹಿಡಿದು ಕೋರ್ಟ್ ವರೆಗೆ ನಾವು ಅರ್ಜಿ ಮೇಲೆ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತಲೇ ಇರುತ್ತೇವೆ.ಆದರೆ ಈಗ ಈ ನಟಿ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಅದರ ಮೇಲಿನ ಎಲ್ಲ ರೀತಿಯ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಈಗ ಜಾಗತೀಕವಾಗಿ ಧ್ವನಿ ಎತ್ತಿದ್ದಾಳೆ.ಅಷ್ಟೇ ಅಲ್ಲದೆ ಈಗ ಅದಕ್ಕೆ ಪೂರಕವಾಗಿ ವಿಶ್ವ ಸಂಸ್ಥೆಯಲ್ಲಿ ಈ ವಿಚಾರವಾಗಿ ಅರ್ಜಿಯೊಂದನ್ನು ಸಲ್ಲಿಸಿದ್ದಾಳೆ. ಈ ಅವರ ಕಾರ್ಯವು ಪ್ರಮುಖವಾಗಿ 'ಫಾರೆವರ್ ಎಗೇನ್ಸ್ಟ್ ಎನಿಮಲ್ ಟೆಸ್ಟಿಂಗ್' ಅಭಿಯಾನದ ಒಂದು ಭಾಗವಾಗಿದೆ.
ಇದೇ ವೇಳೆ ಜಾಕ್ವೆಲಿನ್ ಫರ್ನಾಂಡಿಸ್ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾಗವಹಿಸಿ ಪ್ರಾಣಿ ರಕ್ಷಣೆ ಕುರಿತಾಗಿ ಮಾತನಾಡಿದರು ಹಲವಾರು ಸಾಕು ಪ್ರಾಣಿಗಳನ್ನು ಹೊಂದಿರುವ ಇವರು ಪ್ರಾಣಿಗಳ ರಕ್ಷಣೆಗಾಗಿ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಅದರ ಭಾಗವಾಗಿ ಈ ಕಾರ್ಯವನ್ನು ಕೈಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.