ಶಿವಮೊಗ್ಗ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲುಶಿತ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಗಳಿಗೆ ಪ್ರತಿಯಾಗಿ ಆರಂಭಿಕ ಹಂತದಲ್ಲಿಯೇ ಬಿಗಿಯಾದ ನಿಲುವು ತೆಗೆದುಕೊಳ್ಳಬೇಕಿತ್ತು. ಈ ಸಂಬಂಧ ಆರಂಭದಲ್ಲಿಯೇ ಸಲಹೆಗಳನ್ನ ಕೊಟ್ಟಿದ್ದೇನೆ.ಸರ್ಕಾರದ ನಿರ್ಲಕ್ಷ್ಯದ ಮನೋಭಾವಗಳು ಹಾಗೂ ಘಟನೆಗಳ ಹಿನ್ನೆಲೆಯಲ್ಲಿರುವ ಕಾಣದ ಕೈಗಳು, ಸಮಾಜದಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿ, ಇಂತಹ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ.
ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗಿರಬೇಕು ಎಂಬ ಕಲ್ಪನೆಯನ್ನು ಹಾಳುಮಾಡುವಂತಹ ವಾತಾವರಣ ಕಳೆದ ಮೂರು ನಾಲ್ಕು ತಿಂಗಳಿಂದ ನಡೆಯುತ್ತಿದೆ. ಇಂತಹ ಘಟನೆ ಇನ್ನೂ ಒಂದು ವರ್ಷ ನಡೆಯುತ್ತದೆ. ಹುಬ್ಬಳ್ಳಿಯ ಘಟನೆ ಸಂಬಂಧ ಜೀಪ್ ಮೇಲೆ ಹತ್ತಿ ಪ್ರಚೋದಿಸಿದವರನ್ನ ಬಂಧಿಸಿ ಎಂದಿದ್ದೆ. ಸದ್ಯ ಆತನನ್ನ ಬಂಧಿಸಿದ್ದಾರೆ.
ಆದರೆ, ಬಿಜೆಪಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಿದೆ. ಈ ಕೆಲಸಕ್ಕೆ ಕಾಂಗ್ರೆಸ್‌ನ ಕೆಲವು ಗುಂಪು ಪೆಟ್ರೋಲ್ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ಜನತೆಯು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ರು. ಸರ್ಕಾರ ಈ ಘಟನೆಗೆ ಯಾರೇ ಕಾರಣಕರ್ತರಾಗಿದ್ರು ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಿದೆ.
ಇದನ್ನೂ ಓದಿ : ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’
ಇಬ್ಬರು ಪೊಲೀಸರನ್ನ ಹತ್ಯೆ ಮಾಡಲು ಹೋಗಿದ್ದರು ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಈ ಮಟ್ಟಿಗೆ ಪ್ರತಿನಿತ್ಯ ಸತ್ಯ ಹೋಗುತ್ತದೆ ಎಂದಾದರೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಡಿಜೆ ಹಳ್ಳಿಯಲ್ಲಿ ಘಟನೆಗೆ ಕಾರಣವಾದವರು ಒಂದು ಪಕ್ಷದ ಅಧ್ಯಕ್ಷರ ಜೊತೆ ಓಡಾಡಿಕೊಂಡಿದ್ದಾರೆ. ಅಮಾಯಕರು ಜೈಲಿನಲ್ಲಿದದ್ದಾರೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಎಲ್ಲಾ ಪಕ್ಷಗಳು ಜನರ ಜೀವನವನ್ನು ಪ್ರಮುಖವಾಗಿ ಗಮನಿಸಲಿ ಎಂದು ಸಲಹೆ ನೀಡಿದ್ರು.
ಸರ್ಕಾರದಲ್ಲಿಯೇ ಕಾಣದ ಕೈಗಳ ಅಣತಿಯಂತೆಯೇ ಕೆಲಸವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಅಜಾನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆಯೇ ನಡೆದುಕೊಳ್ಳಬೇಕಿದೆ. ಆದರೆ ಕೆಲ ಸಂಘಟನೆಗಳು ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡುತ್ತಿವೆ. ಸಮಾಜದಲ್ಲಿ ಶಾಂತಿ ನೆಲಸಬೇಕಿದ್ದರೆ, ಇಂತಹ ವಿಷಯವನ್ನು ಕೆದಕಿ ಕೆದಕಿ ಹುಣ್ಣು ಮಾಡುತ್ತಿರುವವರನ್ನ ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದ್ರು.
ಇವರೇನು ಸಮಾಜ ಕಟ್ಟುವವರೇ, ಹಿಂದೂ ಧರ್ಮ ಉಳಿಸುವವರೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಾವು ರಾಮನ ಭಕ್ತರಲ್ಲವೇ, ಪೂಜಿಸುವುದಿಲ್ಲವೇ? ಇವರೇನು ಹಿಂದೂ ಧರ್ಮವನ್ನ ಗುತ್ತಿಗೆ ತೆಗೆದುಕೊಂಡಿದ್ದಾರಾ? ರಾಮ ಈ ರೀತಿ ಕೆಲಸ ಮಾಡಿ ಎಂದಿದ್ದಾರಾ ಎಂದು ಪ್ರಶ್ನಿಸಿದ್ರು.
ಒಂದೊಂದು ಧರ್ಮದ ಆಚರಣೆಗಳಿಗೆ ಧಕ್ಕೆ ಬರುವ ಕೆಲಸವನ್ನು ನಾವು ನೀವು ಯಾಕೆ ಮಾಡಬೇಕು. ಅಂತಹದ್ದಕ್ಕೆ ಪ್ರಚೋದನೆ ಕೊಡುವವರನ್ನು ಜೈಲಿನಲ್ಲಿ ಇಟ್ಟರೆ ಸಮಾಜ ಶಾಂತಿಯಿಂದಇರುತ್ತದೆ ಎಂದರು.
ಅಲ್ಲದೆ ಬುಲ್ಡೋಜರ್ ಸಂಸ್ಕೃತಿ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅಮಾಯಕರು ಬಲಿಪಶು ಆಗುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ರು.
ಇನ್ನು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪಿಎಸ್ಐ ನೇಮಕಾತಿ ಹಗರಣದ ಮೂಲಕ ಬಿಜೆಪಿ ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ವ್ಯಂಗ್ಯವಾಡಿದ ಹೆಚ್‌ಡಿಕೆ, ಈ ಸಂಬಂಧ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ರು.
ಪರ್ಸೆಂಟೇಜ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ, ನಿನ್ನೆ ಕೇಜ್ರಿವಾಲ್ ಅವರು ತಮ್ಮ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರ ಬಂದರೆ ಜೀರೋ ಪರ್ಸೆಂಟ್ ಕಮಿಷನ್ ಸರ್ಕಾರ ತರುತ್ತೇವೆ ಎಂದಿದ್ದಾರೆ. ಆದರೆ ಅವರ ಅಕ್ಕಪಕ್ಕದಲ್ಲಿ ನಿಂತವರ ಜೊತೆ ಸೇರಿಕೊಂಡು ಅವರು ಜೀರೋ ಪರ್ಸೆಂಟ್ ಕಮಿಷನ್ ಸರ್ಕಾರ ತರಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ರು. ಇನ್ನು ನೂರು ರೂಪಾಯಿಯಲ್ಲಿ 65 ರೂಪಾಯಿ ಹೋಗುತ್ತೆ, ಕೇವಲ 35 ಪರ್ಸೆಂಟ್ ಕೆಲಸವಾಗುತ್ತದೆ. ಇದು ಸರಿಯಲ್ಲ. ಈ ಕಾರಣಕ್ಕೆ ಗುತ್ತಿಗೆದಾರರಿಗೆ ಒಂದು ವರ್ಷ ನೀವು ಕೆಲಸ ನಿಲ್ಲಿಸಿ ಎಂದು ಸಲಹೆ ನೀಡಿದ್ದೆ. ಕೆಲಸವನ್ನು ಬಹಿಷ್ಕಾರ ಮಾಡಿ, ನೀವೇ ದುಡ್ಡು ತಗೊಂಡು ಹೋಗಿ ಕೊಟ್ಟರೆ, ಅವರು ಬೇಡ ಎನ್ನುತ್ತಾರೆ. ಕಾಂಪಿಟೇಶನ್ ಮೇಲೆ ಹೋಗುವಾಗ ಅವರು ಡಿಮ್ಯಾಂಡ್ ಹೆಚ್ಚಿಸುತ್ತಾರೆ ಎಂದು ಗುತ್ತಿಗೆದಾರರನ್ನ ಎಚ್ಚರಿಸಿದ್ದೆ. ಇನ್ನು ಈ ವ್ಯವಸ್ಥೆಯ ಮೂಲ ಕಾಂಗ್ರೆಸ್ ಎಂದ ಕುಮಾರಸ್ವಾಮಿ, ಕಾಂಗ್ರೆಸ್‌ನವರೇನು ಅಪ್ಪಟ ಚಿನ್ನವೇ ಎಂದು ಕುಟುಕಿದ್ರು.
ಇದನ್ನೂ ಓದಿ : ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಜನತೆ ಈ ಸಂಬಂಧ ಯಾವ ಪಕ್ಷ ಪರ್ಸೆಂಟೇಜ್ ವಿಚಾರದಲ್ಲಿ ಒಂದಿಷ್ಟು ಸಮಂಜಸವಾಗಿ ನಡೆದುಕೊಂಡಿದೆ ಅಂತವರಿಗೆ ಮಣೆ ಹಾಕಬೇಕು ಎಂ ಕುಮಾರಸ್ವಾಮಿ, ನನ್ನ ಕಾಲಾವಧಿಯಲ್ಲಿ ಕಂಟ್ರಾಕ್ಟರ್‌ಗಳ ಮನೆ ಬಾಗಿಲಿಗೆ ಎನ್ಒಸಿಗಳು ಹೋಗುತ್ತಿದ್ದವು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರದ ವಿರುದ್ಧ ಹೊರಾಟ ಮಾಡಿದವರು ನಾವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮನೆಯಲ್ಲಿ ಕುಳಿತಿದ್ದರು. ನಮ್ಮ ಹೋರಾಟದ ಪ್ರತಿಫಲವಾಗಿ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರು ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
ಈಶ್ವರಪ್ಪನವರ ವಿಚಾರದಲ್ಲಿ ರಾಜೀನಾಮೆಗೆ ನಾನೇ ಡಿಮ್ಯಾಂಡ್ ಮೊದಲು ಮಾಡಿದ್ದೆ. ಬಿಜೆಪಿ ಪರವಾಗಿ ನಾನಿಲ್ಲ. ಸತ್ಯಾಸತ್ಯತೆ ಹೊರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಈಶ್ವರಪ್ಪನವರು ರಾಜೀನಾಮೆ ಕೊಡಬೇಕಿತ್ತು. ಈಗವರ ಬಂಧನ ವಿಚಾರ ಅಗತ್ಯವಿಲ್ಲ ಎಂದಿದ್ದೇನೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.