ನವದೆಹಲಿ: ಕೊರೊನಾ ವೈರಸ್ ನಿಂದ ಕಾಪಾಡಲು ಸಿದ್ಧಗೊಂಡಿರುವ ಆಯುರ್ವೇದ ಔಷಧಿಗಳ ಕ್ಲಿನಿಕಲ್ ಪರೀಕ್ಷೆ ಅಮೇರಿಕಾದಲ್ಲಿ ನಡೆಯಲಿದೆಯಂತೆ. ಈ ಕುರಿತು ಹೇಳಿಕೆ ನೀಡಿರುವ ಅಮೇರಿಕಾದಲ್ಲಿರುವ ಭಾರತೀಯ ರಾಜದೂತ ತರನಜೀತ್ ಸಿಂಗ್ ಸಂಧು, "ಭಾರತ ಹಾಗೂ ಅಮೇರಿಕಾಗಳಲ್ಲಿ ಆಯುರ್ವೇದ ಚಿಕಿತ್ಸೆಗೆಂದೇ ತಯಾರಾಗಿರುವ ಔಷಧಿಗಳ ಕ್ಲಿನಿಕಲ್ ಟ್ರಯಲ್ ಜಂಟಿಯಾಗಿ ನಡೆಸಲು ಯೋಜನೆ ರೂಪಿಸುತ್ತಿರುವುದಾಗಿ ಹೇಳಿದ್ದಾರೆ. ಪ್ರತಿಷ್ಟಿತ ಭಾರತೀಯ-ಅಮೆರಿಕಾದ ವೈಜ್ಞಾನಿಕರು, ವಿದ್ವಾಂಸರು ಹಾಗೂ ವೈದ್ಯರ ಒಂದು ಸಮೂಹದ ಜೊತೆಗೆ ನಡೆಸಲಾಗಿರುವ ಡಿಜಿಟಲ್ ಸಂವಾದದಲ್ಲಿ ಮಾತನಾಡಿರುವ ಸಂಧು, ಸಂಸ್ಥೆಗಳ ಪಾಲುದಾರಿಕೆಯ ವ್ಯಾಪಕ ನೆಟ್ವರ್ಕ್ ಮೂಲಕ ಕೊವಿಡ್ 19 ವಿರುದ್ಧ ಹೋರಾಡಲು ಎರಡೂ ದೇಶಗಳ ವಿಜ್ಞಾನಿಗಳ ಸಮುದಾಯ ಪರಸ್ಪರ ಕೈಜೋಡಿಸಿದ್ದಾರೆ" ಎಂದು ಹೇಳಿದ್ದಾರೆ.
"ಜಂಟಿ ಸಂಶೋಧನೆ, ಬೋಧನೆ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಆಯುರ್ವೇದವನ್ನು ಉತ್ತೇಜಿಸಲು ನಮ್ಮ ಸಂಸ್ಥೆಗಳು ಒಗ್ಗೂಡಿವೆ. ಕೋವಿಡ್ -19 ರ ವಿರುದ್ಧ ರಕ್ಷಿಸಲು ಆಯುರ್ವೇದ ವೈದ್ಯರು ಮತ್ತು ಎರಡೂ ದೇಶಗಳ ಸಂಶೋಧಕರು ಆಯುರ್ವೇದ ಔಷಧಿಗಳ ಜಂಟಿ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದಾರೆ" ಎಂದು ಸಂಧು ಹೇಳಿದ್ದಾರೆ.
"ನಮ್ಮ ವಿಜ್ಞಾನಿಗಳು ನಿಟ್ಟಿನಲ್ಲಿ ಜ್ಞಾನ ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ ಭಾರತೀಯ ಔಷಧಿ ಕಂಪನಿಗಳು ಕೈಗೆಟುಕುವ ದರದಲ್ಲಿ ಔಷಧಿ ಮತ್ತು ಲಸಿಕೆಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ" ಎಂದು ಸಂಧು ಹೇಳಿದ್ದಾರೆ.
ತರನಜೀತ್ ಸಿಂಗ್ ಸಂಧು ಅವರ ಪ್ರಕಾರ, ಭಾರತೀಯ ಔಷಧಿ ಕಂಪನಿಗಳು ಯುಎಸ್ ಮೂಲದ ಸಂಸ್ಥೆಗಳೊಂದಿಗೆ ಕನಿಷ್ಠ ಮೂರು ಸಹಭಾಗಿತ್ವವನ್ನು ಹೊಂದಿವೆ. ಇದು ಭಾರತ ಮತ್ತು ಯುಎಸ್ ಗೆ ಮಾತ್ರ ಪ್ರಯೋಜನವನ್ನು ನೀಡುವುದಲ್ಲದೆ, ಕೋವಿಡ್ -19 ರ ವಿರುದ್ಧ ಹೊರಡಲು ಲಸಿಕೆ ಅಗತ್ಯವಿರುವ ವಿಶ್ವದಾದ್ಯಂತದ ಶತಕೋಟಿ ಜನರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.